ಬೆಂಗಳೂರು: ಬೆಂಗಳೂರಲ್ಲಿ ವಿಷ ಸೇವಿಸಿ ವೃದ್ದ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಡೆದಿದೆ. ಮೃತರನ್ನು ಈಶ್ವರ್ ಆಚಾರಿ (73) ಹಾಗೂ ಅವರ ಪತ್ನಿ ಗೌರಿ (66) ಎಂದು ಗುರುತಿಸಲಾಗಿದೆ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿದೆ.
ಗೌರಿ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಸೊಂಟದ ಸಮಸ್ಯೆಯಿಂದ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಇಬ್ಬರು ಹೆಣ್ಣುಮಕ್ಕಳೇ ಭರಿಸುತ್ತಿದ್ದರು ಎನ್ನಲಾಗಿದೆ.
ಮಕ್ಕಳಿಗೆ ತಮ್ಮಿಂದ ಕಷ್ಟವಾಗುತ್ತಿದೆ ಎಂಬ ನೋವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ದಂಪತಿ, ಇದೇ ಕಾರಣಕ್ಕೆ ತೀವ್ರ ಮನನೊಂದು ರಾತ್ರಿ ವೇಳೆ ಮನೆಯಲ್ಲಿ ವಿಷ ಸೇವಿಸಿ ಮಲಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಬೆಳಿಗ್ಗೆ ಮಗಳು ಕರೆ ಮಾಡಿದಾಗ ಇಬ್ಬರೂ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆಗೆ ಬಂದು ನೋಡಿದಾಗ, ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬಸವೇಶ್ವರನಗರ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



