ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಯೋಜನೆಯಲ್ಲಿ ಬಹುಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಗಂಭೀರ ತಿರುವು ಸಿಕ್ಕಿದ್ದು, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಹೈಲೇವಲ್ ತನಿಖೆಗೆ ಆದೇಶಿಸಿದ್ದಾರೆ.
ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಯಡಿ 5 ಕೋಟಿ ರೂ. ಅನುದಾನ ನೀಡಲಾಗಿದ್ದು, ಅದರಲ್ಲಿ 4.25 ಕೋಟಿ ರೂ. ಕಾಮಗಾರಿಗೆ ಖರ್ಚು ಮಾಡಲಾಗಿದೆ. ಆದರೆ ನಿಯಮ ಉಲ್ಲಂಘನೆ, ಕಳಪೆ ಕಾಮಗಾರಿ ಹಾಗೂ ದುಬಾರಿ ಬೆಲೆಗೆ ಪರಿಕರ ಖರೀದಿ ಆರೋಪಗಳು ಪ್ರಕರಣವನ್ನು ಗಂಭೀರಗೊಳಿಸಿವೆ.
ಈ ಹಿಂದೆ ನಿವೃತ್ತ ನ್ಯಾಯಾಧೀಶ ಎಚ್.ಬಿ. ರವೀಂದ್ರನಾಥ್ ನಡೆಸಿದ ತನಿಖೆಯಲ್ಲಿ ಆರೋಪಗಳು ಸತ್ಯ ಎಂದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ನಿವೃತ್ತ ನ್ಯಾಯಮೂರ್ತಿ ಆರ್. ಗುರುರಾಜನ್ ನೇತೃತ್ವದಲ್ಲಿ ಏಕಸದಸ್ಯ ಸಮಿತಿ ರಚನೆಗೊಂಡಿದ್ದು, ಒಂದು ತಿಂಗಳೊಳಗೆ ಸಂಪೂರ್ಣ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಪ್ರಕರಣ ರಾಜ್ಯದ ಶಿಕ್ಷಣ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎಬ್ಬಿಸಿದ್ದು, ತನಿಖಾ ವರದಿ ಮೇಲೆ ಮುಂದಿನ ಕಾನೂನು ಕ್ರಮ ನಿರ್ಧಾರವಾಗಲಿದೆ.



