ಚಿಕ್ಕಮಗಳೂರು: ಜಿಲ್ಲೆಯ ಕೊಟ್ಟಿಗೆಹಾರ, ಬಣಕಲ್, ಆಲ್ದೂರು ಹಾಗೂ ಮತ್ತಿಕಟ್ಟೆ ಭಾಗಗಳಲ್ಲಿ ಇಂದು ಗುಡುಗು-ಸಿಡಿಲು ಸಮೇತ ಧಾರಾಕಾರ ಮಳೆ ಸುರಿದಿದೆ.
ಹಲವೆಡೆ ಆಲಿಕಲ್ಲು ಸಹಿತ ಮಳೆಯೂ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಹಗಲಿನಲ್ಲಿ ಬಿಸಿಲು, ಸಂಜೆ ವೇಳೆಗೆ ಮಳೆ ಎಂಬಂತೆ ಹವಾಮಾನ ಬದಲಾವಣೆ ಕಂಡುಬರುತ್ತಿದ್ದು, ಇದರಿಂದ ಜನರಿಗೂ ಕೊಂಚ ತೊಂದರೆ ಆಗಿತ್ತು. ಅಷ್ಟೇ ಅಲ್ಲ ಬಿಸಿಲು–ಮಳೆಯ ನಡುವಿನ ಈ ತೀವ್ರ ಬದಲಾವಣೆಯಿಂದ ಭೂಮಿಯ ಉಷ್ಣತೆ ಹೆಚ್ಚಾಗಿ ಜನರು ಹೈರಾಣಾಗಿದ್ದಾರೆ.
ಮತ್ತೊಂದೆಡೆ, ಈ ಮಳೆಯಿಂದ ಕಾಫಿ ಮತ್ತು ಅಡಿಕೆ ಬೆಳೆಗಳಿಗೆ ನೀರಿನ ಕೊರತೆಯಿಂದ ಪರದಾಡುತ್ತಿದ್ದ ರೈತರಿಗೆ ಸ್ವಲ್ಪ ನಿರಾಳತೆ ದೊರೆತಿದೆ. ಆದರೆ ಆಲಿಕಲ್ಲು ಮಳೆಯ ಪರಿಣಾಮ ಬೆಳೆಗಳಿಗೆ ಹಾನಿಯಾಗುವ ಆತಂಕವೂ ಬೆಳೆಗಾರರಲ್ಲಿ ಉಂಟಾಗಿದೆ.
ಆಲ್ದೂರು ಪಟ್ಟಣದಲ್ಲಿ ಮಳೆಯ ಸಂತೋಷದಲ್ಲಿ ವೃದ್ಧರೊಬ್ಬರು ರಸ್ತೆಯ ಮಧ್ಯದಲ್ಲಿ ಮಳೆಯಲ್ಲಿ ನೆನೆಯುತ್ತಾ ಡ್ಯಾನ್ಸ್ ಮಾಡಿದ್ದು ಸ್ಥಳೀಯರಲ್ಲಿ ಗಮನ ಸೆಳೆದಿದೆ. ಮತ್ತಿಕಟ್ಟೆ ಸಮೀಪದ ಅಡ್ಡಮಕ್ಕಿ ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ಮಹಿಳೆಯೊಬ್ಬರು ಆಲಿಕಲ್ಲುಗಳನ್ನು ಸಂಗ್ರಹಿಸಿರುವ ಘಟನೆ ಕೂಡ ನಡೆದಿದೆ.
ಒಟ್ಟಿನಲ್ಲಿ, ನಿರಂತರ ಹವಾಮಾನ ಬದಲಾವಣೆಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.



