ಮುಂಬೈ: ಮಹಾರಾಷ್ಟ್ರದಲ್ಲಿ ಎಲ್ಲಾ ಪರವಾನಗಿ ಪಡೆದ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆ ಕಡ್ಡಾಯಗೊಳಿಸುವ ಕುರಿತು ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಸರ್ಕಾರ ಆರು ತಿಂಗಳ ತಾತ್ಕಾಲಿಕ ತಡೆ ನೀಡಿದೆ.
ಇತ್ತೀಚಿಗಷ್ಟೇ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಮೇ 1ರಿಂದ ರಾಜ್ಯಾದ್ಯಂತ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಮಾತನಾಡುವುದು, ಓದುವುದು ಹಾಗೂ ಬರೆಯುವುದು ಕಡ್ಡಾಯ ಎಂದು ಘೋಷಿಸಿದ್ದರು. ನಿಯಮ ಪಾಲಿಸದಿದ್ದರೆ ಪರವಾನಗಿ ರದ್ದುಗೊಳಿಸಲಾಗುವುದು ಎಂಬ ಎಚ್ಚರಿಕೆಯೂ ನೀಡಲಾಗಿತ್ತು.
ಆದರೆ ಈ ನಿರ್ಧಾರಕ್ಕೆ ಸಂಬಂಧಿಸಿ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆ ಮುಂದುವರಿದಿದ್ದು, ಶಿವಸೇನಾ ನಾಯಕ ಸಂಜಯ್ ನಿರುಪಮ್ ಅವರು ಸಚಿವ ಪ್ರತಾಪ್ ಸರ್ನಾಯಕ್ ಅವರಿಗೆ ಪತ್ರ ಬರೆದು ಈ ಆದೇಶವನ್ನು ಕನಿಷ್ಠ ಆರು ತಿಂಗಳುಗಳಿಂದ ಒಂದು ವರ್ಷದವರೆಗೆ ಮುಂದೂಡಬೇಕು ಎಂದು ಮನವಿ ಮಾಡಿದ್ದಾರೆ.
ಮರಾಠಿ ಮಹಾರಾಷ್ಟ್ರದ ಗುರುತು ಮತ್ತು ಹೆಮ್ಮೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಭಾಷೆ ಕಲಿಯುವುದು ವ್ಯಕ್ತಿಯ ಸಾಮರ್ಥ್ಯ ಮತ್ತು ಸಮಯದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಕ್ಷಣದ ಕಡ್ಡಾಯ ಜಾರಿಗೆ ತರಲಾಗುವುದರಿಂದ ಅಶಾಂತಿ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ಚಾಲಕರಿಗೆ ಮರಾಠಿ ಕಲಿಯಲು ಸಮಯ ನೀಡಬೇಕು. ಪ್ರೀತಿಯಿಂದ ಕಲಿಸಿದ ಭಾಷೆ ದೀರ್ಘಕಾಲ ಉಳಿಯುತ್ತದೆ, ಭಯದಿಂದ ಜಾರಿಗೊಳಿಸಿದ ಭಾಷೆ ಅಸಮಾಧಾನಕ್ಕೆ ಕಾರಣವಾಗಬಹುದು ಎಂದು ಸಂಜಯ್ ನಿರುಪಮ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಈ ನಡುವೆ ಸರ್ಕಾರದ ಮೂಲ ಆದೇಶದಲ್ಲಿ ರಾಜ್ಯದ ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಭಾಷೆಯಲ್ಲಿ ಸಂವಹನ ನಡೆಸಲು ತಿಳಿದಿರಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಲಾಗಿತ್ತು.
ಸದ್ಯ ಸರ್ಕಾರದ ಈ ತಾತ್ಕಾಲಿಕ ತೀರ್ಮಾನದಿಂದ ನಿಯಮ ಜಾರಿಗೆ ಸಂಬಂಧಿಸಿದ ಮುಂದಿನ ಹೆಜ್ಜೆ ಏನು ಎಂಬ ಕುತೂಹಲ ಮೂಡಿದೆ.



