ಚೆನ್ನೈ: ಕರೂರು ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡುವ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.
ಸಂತ್ರಸ್ತ ಕುಟುಂಬಗಳಿಗೆ ಕರುಣಾಳು ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವ ನಿರ್ಧಾರವು ಇತರರು ಕೂಡ ಇದೇ ರೀತಿಯ ಬೇಡಿಕೆ ಮುಂದಿಡಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸರ್ಕಾರದ ಈ ನಿರ್ಧಾರವು ಸಂವಿಧಾನದ ಆರ್ಟಿಕಲ್ 14 (ಸಮಾನತೆಯ ಹಕ್ಕು) ಹಾಗೂ ಆರ್ಟಿಕಲ್ 16 (ಸರ್ಕಾರಿ ಉದ್ಯೋಗದಲ್ಲಿ ಸಮಾನ ಅವಕಾಶ) ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ಕರೂರು ಕಾಲ್ತುಳಿತ ಸಂತ್ರಸ್ತರ ಕುಟುಂಬಗಳಿಗೆ ಉದ್ಯೋಗ ನೀಡುವ ಸಂಬಂಧ ಮುಖ್ಯಮಂತ್ರಿ ವಿಜಯ್ ಅವರು ಇತ್ತೀಚೆಗೆ ಕರೂರಿಗೆ ಭೇಟಿ ನೀಡಿದ್ದರು. ಈ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ 41 ಕುಟುಂಬಗಳ ಪೈಕಿ 32 ಕುಟುಂಬಗಳಿಗೆ ಕರುಣಾಳು ಆಧಾರದ ಸರ್ಕಾರಿ ಉದ್ಯೋಗದ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದ್ದರು.
ಆದರೆ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಿರಿಯ ಎಐಎಡಿಎಂಕೆ ನಾಯಕ ಆರ್.ಬಿ. ಉದಯಕುಮಾರ್, ತಮಿಳುನಾಡಿನಲ್ಲಿ ಸರ್ಕಾರಿ ನೇಮಕಾತಿಗಳು ತಮಿಳುನಾಡು ಸಾರ್ವಜನಿಕ ಸೇವಾ ಆಯೋಗ (ಟಿಎನ್‌ಪಿಎಸ್‌ಸಿ) ಮೂಲಕ ನಿಯಮಾನುಸಾರ ನಡೆಯಬೇಕು ಎಂದು ಹೇಳಿದ್ದರು.
ರಾಜಕೀಯ ಕಾರಣಗಳಿಗಾಗಿ ನಿಯಮಗಳನ್ನು ಬದಿಗೊತ್ತಿ ಸರ್ಕಾರಿ ಉದ್ಯೋಗವನ್ನು ಪರಿಹಾರವಾಗಿ ನೀಡುವುದು ಸರಿಯಲ್ಲ. ಇದರಿಂದ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಕರೂರು ಕಾಲ್ತುಳಿತ ಪ್ರಕರಣ:
2025ರ ಸೆಪ್ಟೆಂಬರ್‌ನಲ್ಲಿ ಡಿಎಂಕೆ ಆಡಳಿತದಲ್ಲಿದ್ದ ವೇಳೆ ನಟ ಹಾಗೂ ಟಿವಿಕೆ ಪಕ್ಷದ ನಾಯಕ ವಿಜಯ್ ಭಾಗವಹಿಸಿದ್ದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ ಮಕ್ಕಳು ಸೇರಿದಂತೆ 41 ಮಂದಿ ಮೃತಪಟ್ಟಿದ್ದರು.
ವಿಜಯ್ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಅಲ್ಲದೇ ರ‍್ಯಾಲಿ ಸ್ಥಳದಲ್ಲಿ ಕುಡಿಯುವ ನೀರು, ಆಹಾರ ಹಾಗೂ ಶೌಚಾಲಯದಂತಹ ಮೂಲ ಸೌಲಭ್ಯಗಳ ಕೊರತೆಯೂ ಇತ್ತು ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿತ್ತು.
ಈ ಆರೋಪಗಳನ್ನು ಟಿವಿಕೆ ಪಕ್ಷ ತಳ್ಳಿಹಾಕಿದ್ದು, ಪೊಲೀಸರ ವೈಫಲ್ಯ ಹಾಗೂ ಮಾಜಿ ಡಿಎಂಕೆ ಸಚಿವ ಸೆಂಥಿಲ್ ಬಾಲಾಜಿ ಅವರ ಪಿತೂರಿಯಿಂದ ಘಟನೆ ನಡೆದಿದೆ ಎಂದು ಆರೋಪಿಸಿತ್ತು.
ನಂತರ ಸುಪ್ರೀಂ ಕೋರ್ಟ್ ಪ್ರಕರಣದ ತನಿಖೆಯನ್ನು ರಾಜ್ಯ ಮಟ್ಟದ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿತ್ತು. ಪ್ರಕರಣದ ತನಿಖೆಯನ್ನು ಸದ್ಯ ಸಿಬಿಐ ಮುಂದುವರಿಸುತ್ತಿದೆ.



