ಮುಂಬೈ: ಮಹಾರಾಷ್ಟ್ರದ ನಾಂದೇಡ್-ಭೋಕರ್ ಹೆದ್ದಾರಿಯಲ್ಲಿ ಟ್ಯಾಕ್ಸಿ ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ.
ನಾಂದೇಡ್‌ನಿಂದ ಭೋಕರ್ ಕಡೆಗೆ ಟಾಟಾ ಮ್ಯಾಜಿಕ್ ವಾಹನ ತೆರಳುತ್ತಿದ್ದ ವೇಳೆ ರಾತ್ರಿ 8 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್‌ಗೆ ಟಾಟಾ ಮ್ಯಾಜಿಕ್ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನ ಸಂಪೂರ್ಣವಾಗಿ ಹಾನಿಗೊಂಡಿದೆ.
ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಎಂಟು ಮಂದಿಯನ್ನು ನಾಂದೇಡ್ ಹಾಗೂ ಭೋಕರ್‌ನ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಹೆದ್ದಾರಿ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

