ಗದಗ: ವಾಕಿಂಗ್ ಮಾಡುತ್ತಿದ್ದ ಮೂವರ ಮೇಲೆ ಕಾರೊಂದು ಹರಿದ ಪರಿಣಾಮ ಶಿಕ್ಷಕ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ಮೂಲತಃ ಮಾಡಳ್ಳಿ ಗ್ರಾಮದ ಅಶೋಕ ಸರವಿ(52) ಹಾಗೂ ಆಟೋ ಚಾಲಕ ಶಿವಾನಂದ ಹುಲಕೋಟಿ(50) ಮೃತರು. ಘಟನೆಯಲ್ಲಿ ಮತ್ತೋರ್ವ ಶಿಕ್ಷಕ ಎಮ್.ಎಸ್ ಚಾಕಲಬ್ಬಿ ಗಾಯಗೊಂಡಿದ್ದಾರೆ. ಮೃತರಲ್ಲಿ ಅಶೋಕ್ ಸರವಿ ಅಕ್ಕಿಗುಂದ ತಾಂಡಾದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಹುಬ್ಬಳ್ಳಿ ರಸ್ತೆಯಲ್ಲಿರುವ ಚೆನ್ನಮ್ಮ ಕಾಲೇಜ್ ಸಮೀಪ ಈ ಘಟನೆ ಸಂಭವಿಸಿದೆ. ಮುಂಜಾನೆ ಎಂದಿನಂತೆ ವಾಕಿಂಗ್‌ಗೆ ತೆರಳಿದ್ದ ಮೂವರಿಗೆ ಲಕ್ಷ್ಮೇಶ್ವರದಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ ಅವರನ್ನು ತಕ್ಷಣ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



