ಬಳ್ಳಾರಿ: ತಾಲೂಕಿನ ಚಾಗನೂರು ಗ್ರಾಮದಲ್ಲಿ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಭಾರೀ ಅಗ್ನಿ ಅವಘಡ ಸಂಭವಿಸಿ 25ಕ್ಕೂ ಹೆಚ್ಚು ಹುಲ್ಲಿನ ಬಣವೆಗಳು ಸುಟ್ಟು ಭಸ್ಮವಾಗಿವೆ.
ನೋಡನೋಡುತ್ತಿದ್ದಂತೆ ಬಣವೆಗಳಿಗೆ ಬೆಂಕಿ ತಗುಲಿ ಧಗಧಗನೆ ಹೊತ್ತಿ ಉರಿದ ಪರಿಣಾಮ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಈ ಅವಘಡದಲ್ಲಿ ಸುಮಾರು ₹10 ಲಕ್ಷ ಮೌಲ್ಯದ ಹುಲ್ಲಿನ ಬಣವೆಗಳು ನಾಶವಾಗಿರುವುದಾಗಿ ಅಂದಾಜಿಸಲಾಗಿದೆ.
ಘಟನೆ ಪಿಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ.



