HomeGadag Newsಬಂಜಾರ ಸಮಾಜದಿಂದ ಐತಿಹಾಸಿಕ ನಿರ್ಧಾರ: ವರದಕ್ಷಿಣೆ ಸಂಪೂರ್ಣ ನಿಷೇಧ, ದುಂದು ವೆಚ್ಚಕ್ಕೂ ಕಡಿವಾಣ!

ಬಂಜಾರ ಸಮಾಜದಿಂದ ಐತಿಹಾಸಿಕ ನಿರ್ಧಾರ: ವರದಕ್ಷಿಣೆ ಸಂಪೂರ್ಣ ನಿಷೇಧ, ದುಂದು ವೆಚ್ಚಕ್ಕೂ ಕಡಿವಾಣ!

For Dai;y Updates Join Our whatsapp Group

Spread the love

ಗಜೇಂದ್ರಗಡ: ಸಮಾಜದಲ್ಲಿ ಆಳವಾಗಿ ಬೇರೂರಿರುವ ವರದಕ್ಷಿಣೆ ಪಿಡುಗಿಗೆ ಅಂತ್ಯ ಹಾಡುವ ದಿಶೆಯಲ್ಲಿ ಗಜೇಂದ್ರಗಡ ತಾಲ್ಲೂಕಿನ 17 ತಾಂಡಾದ ಬಂಜಾರ ಸಮಾಜದ ಹಿರಿಯರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ದಕ್ಷಿಣಕಾಶಿ ಕಾಲಕಾಲೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ವರದಕ್ಷಿಣೆ ನೀಡುವುದು ಹಾಗೂ ಪಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸುವ ಠರಾವು ಅಂಗೀಕರಿಸಲಾಯಿತು.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆದ ಸಭೆಯಲ್ಲಿ ಸಮಾಜದ ನಾಯಕರು, ಕಾರಬಾರಿಗಳು, ಡಾವ್‌ಗಳು, ಗುರುಹಿರಿಯರು ಹಾಗೂ ಯುವಕರು ಭಾಗವಹಿಸಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು. ಹೆಚ್ಚುತ್ತಿರುವ ಬಂಗಾರದ ಬೆಲೆ, ಮದುವೆ ಖರ್ಚಿನ ಭಾರ ಹಾಗೂ ಸಾಮಾಜಿಕ ಒತ್ತಡದ ಹಿನ್ನೆಲೆಯಲ್ಲಿ ಬಡ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಆತಂಕ ವ್ಯಕ್ತವಾಯಿತು.

ಸಭೆಯಲ್ಲಿ ವರದಕ್ಷಿಣೆ ನಿಷೇಧದ ಜೊತೆಗೆ ಮದುವೆಗಳಲ್ಲಿ ದುಂದು ವೆಚ್ಚಕ್ಕೆ ತಡೆ, ಮದ್ಯಪಾನ ಹಾಗೂ ಡಿಜೆ ಸಂಪೂರ್ಣ ನಿಷೇಧ, ಆಹಾರ ವ್ಯಯ ಕಡಿತ, ಮದುವೆ ಕಾರ್ಯಕ್ರಮಗಳಲ್ಲಿ ಅತಿಥಿಗಳ ಸಂಖ್ಯೆಗೆ ಮಿತಿ ಸೇರಿದಂತೆ ಹಲವು ಸಮಾಜಮುಖಿ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಮದುವೆಗಳಲ್ಲಿ ಅಗತ್ಯ ವಸ್ತುಗಳಷ್ಟೇ ನೀಡಬೇಕು, ಹೆಣ್ಣಿನ ಮನೆ ಮುಂದೆ ಮದುವೆ ಮಾಡಿದರೆ ಖರ್ಚನ್ನು ಅರ್ಧ-ಅರ್ಧವಾಗಿ ಹಂಚಿಕೊಳ್ಳಬೇಕು ಎಂಬ ನಿಯಮಕ್ಕೂ ಒಪ್ಪಿಗೆ ನೀಡಲಾಗಿದೆ. ತಾಳಿಯಲ್ಲಿ ಗಂಡು-ಹೆಣ್ಣಿನ ಕಡೆಯವರು ಒಂದೊಂದು ತಾಳಿ ನೀಡಬೇಕು, ತಾಳಿಯ ತೂಕ 5 ಗ್ರಾಂ ಒಳಗಿರಬೇಕು ಎಂದು ಕೂಡ ನಿರ್ಧರಿಸಲಾಗಿದೆ.

ಅದೇ ರೀತಿ, ಮರಣಾನಂತರ ನಡೆಯುವ ಅನಗತ್ಯ ಮಾಂಸಹಾರಿ ಊಟಗಳನ್ನು (ಹಾಡ್ ಬಕರಾ) ಸಂಪೂರ್ಣ ನಿಷೇಧಿಸಲಾಗಿದ್ದು, ದುಃಖದ ಸಂದರ್ಭಗಳಲ್ಲಿ ಸಾಂತ್ವಾನ ನೀಡುವ ಸಂಪ್ರದಾಯವನ್ನು ಮಾತ್ರ ಅನುಸರಿಸಲು ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ 17 ತಾಂಡಾದ ಹಿರಿಯರು ಒಮ್ಮತದಿಂದ ಈ ನಿಯಮಗಳಿಗೆ ಒಪ್ಪಿಗೆ ಸೂಚಿಸಿ ಠರಾವು ಪಾಸ್ ಮಾಡಿದರು. ಈ ನಿಯಮಗಳನ್ನು ಇತರ ಜಿಲ್ಲೆಗಳ ತಾಂಡಾಗಳಿಗೂ ಮಾದರಿಯಾಗಿ ಅನುಸರಿಸುವಂತೆ ಮನವಿ ಮಾಡಲಾಗಿದ್ದು, ಉಲ್ಲಂಘನೆ ಮಾಡಿದರೆ ತಾಂಡಾ ಹಿರಿಯರು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸಭೆಯಲ್ಲಿ ಅನೇಕ ತಾಂಡಾ ಮುಖಂಡರು ಹಾಗೂ ಸಮಾಜದ ಪ್ರಮುಖರು ಭಾಗವಹಿಸಿದ್ದರು. ಈ ನಿರ್ಧಾರವನ್ನು ಸಮಾಜದ ಇತರ ವರ್ಗಗಳು ಕೂಡ ಮಾದರಿಯಾಗಿ ಪರಿಗಣಿಸುವ ಸಾಧ್ಯತೆ ವ್ಯಕ್ತವಾಗಿದೆ.

ಈ ವೇಳೆ ಗಜೇಂದ್ರಗಡ ತಾಂಡಾದ ಸುರೇಶ ಸಿ. ರಾಠೋಡ, ಯಮನಪ್ಪ ಎಸ್.‌ ರಾಠೋಡ, ಮನ್ನುನಾಯಕ ಡಿ. ರಾಠೋಡ, ದುರಗಪ್ಪ ಮಾಳೋತ್ತರ, ಶಿವಪುತ್ರಪ್ಪ ಡಿ. ಮಾಳೋತ್ತರ, ಗೋವಿಂದಪ್ಪ ಗುಗಲೊತ್ತರ, ರಾಜೂರ ತಾಂಡಾದ ತುಕ್ಕಪ್ಪ ರಾಠೋಡ, ಪಡಿಯಪ್ಪ ಚವ್ಹಾಣ, ದಿಂಡೂರ ತಾಂಡಾದ ಎಸ್. ಎಸ್. ಲಮಾಣಿ, ಲಕ್ಕಲಕಟ್ಟಿ ತಾಂಡಾದ ಭೀಮಪ್ಪ ನಾಯಕ, ಭೈರಾಪುರ ತಾಂಡಾದ ಲಕ್ಷ್ಮಣ ರಾಠೋಡ, ಜನತಾ ಪ್ಲಾಟ್ ತಾಂಡಾದ ಕೃಷ್ಣಪ್ಪ ರಾಠೋಡ, ನಾರಾಯಣಪ್ಪ ಮಾಳೋತ್ತರ, ನೆಲ್ಲೂರು ತಾಂಡಾದ ಶಾಂತಪ್ಪ ರಾಠೋಡ, ಶರಣಪ್ಪ ಲಮಾಣಿ, ಸರ್ಜಾಪುರ ತಾಂಡಾದ ಮಹಾಂತೇಶ ರಾಠೋಡ,

ಚಂದ್ರು ಕಾರಬಾರಿ, ಶಂಕ್ರಪ್ಪ ನಾಯಕ, ಪೋಮಪ್ಪ ಕಾರಬಾರಿ, ರುದ್ರಾಪುರ ತಾಂಡಾದ ಎಂ. ವೈ. ಮಾಳೋತ್ತರ, ತುಕ್ಕಪ್ಪ ರಾಠೋಡ, ನೇಮಪ್ಪ ಮಾಳೋತ್ತರ, ಅಮರಗಟ್ಟಿ ತಾಂಡಾದ ಸಕ್ರಪ್ಪ ರಾಠೋಡ, ಕೊಡಗಾನೂರ ತಾಂಡಾದ ಕಮಲಪ್ಪ ರಾಠೋಡ, ದುರ್ಗಪ್ಪ ಮಾಳೋತ್ತರ, ಬೆಣಚಮಟ್ಟಿ ತಾಂಡಾದ ಪುಂಡಲೀಕ ನಾಯಕ, ಕಾಂತಪ್ಪ ಕಾರಬಾರಿ, ನಾಗರಸಕೊಪ್ಪ ತಾಂಡಾದ ರಾಮಪ್ಪ ರಾಠೋಡ, ಶರಣಪ್ಪ ಮಾಳೋತ್ತರ ಗೌಡಗೇರಿ ತಾಂಡಾದ ಕುಮಾರ ರಾಠೋಡ, ಯಮನಪ್ಪ ಮಾಳೋತ್ತರ ಇತರರು ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!