ಉಡುಪಿ: ರಾಜ್ಯದ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಭಾನುವಾರ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಅಂಬಾನಿ ಕುಟುಂಬದ ಗುರುಜಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಅನಂತ್ ಅಂಬಾನಿ, ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಪೂಜೆ ವೇಳೆ ದೇವಾಲಯದ ಅರ್ಚಕರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ದೇವಾಲಯಕ್ಕೆ ಆಗಮಿಸಿದ ಅನಂತ್ ಅಂಬಾನಿಗೆ ದೇವಸ್ಥಾನ ಆಡಳಿತ ಮಂಡಳಿಯ ವತಿಯಿಂದ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಯಿತು. ಬಳಿಕ ದೇವಸ್ಥಾನದ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.
ಮೂಲಗಳ ಪ್ರಕಾರ, ಜೂನ್ 13ರಂದು ಅನಂತ್ ಅಂಬಾನಿ ಕೊಲ್ಲೂರು ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ ಮುಂಬೈನಲ್ಲಿ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಪ್ರವಾಸವನ್ನು ಮುಂದೂಡಲಾಗಿತ್ತು. ಬಳಿಕ ಭಾನುವಾರ ಸಂಜೆ ಕೊಲ್ಲೂರಿಗೆ ಆಗಮಿಸಿದ ಅವರು ದೇವಿಯ ದರ್ಶನ ಪಡೆದರು.
ಇತ್ತೀಚೆಗಷ್ಟೇ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕೂಡ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವಿಗೆ ಬೆಳ್ಳಿಯ ಖಡ್ಗ ಅರ್ಪಿಸಿದ್ದರು. ಅದರ ಬೆನ್ನಲ್ಲೇ ಅನಂತ್ ಅಂಬಾನಿ ಭೇಟಿ ನೀಡಿರುವುದು ಭಕ್ತರ ಗಮನ ಸೆಳೆದಿದೆ.



