ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಜಕೀಯ ತಾಪಮಾನ ತಾರಕಕ್ಕೇರಿದ್ದು, ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಆರಂಭಗೊಳ್ಳಲಿದೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಭ್ಯರ್ಥಿಗಳು ಸಹಾಯಕ ಆಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳ ಮುಂದೆ ತಮ್ಮ ನಾಮಪತ್ರ ಸಲ್ಲಿಸುವ ಹುಮ್ಮಸ್ಸಿನಲ್ಲಿದ್ದಾರೆ. ಭಾರತೀಯ ಜನತಾ ಪಕ್ಷದಿಂದ ಚಿಂತರಪಳ್ಳಿ ಬಣಕಾರ ಸುರೇಶ್ ಒಮ್ಮತದ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದು, ಅವರ ನಾಮಪತ್ರ ಸಲ್ಲಿಕೆ ಖಚಿತವಾಗಿದೆ.
ಇನ್ನು ಕಾಂಗ್ರೆಸ್ ಪಾಳಯದಲ್ಲಿ ಗೊಂದಲ ಗರಿಗೆದರಿದ್ದು, ತೆಲಿಗಿ ನೆಲ್ಲು ಇಸ್ಮಾಯಿಲ್ ಸಾಬ್, ರೇಷ್ಮಾ ಸಿಖಂದರ್, ಅಜೀಜುಲ್ಲಾ, ಖಾಜಾ ಬನ್ನಿ ಹಾಗೂ ಗುಂಡ್ರು ಸರಸ್ವತಿ ಸೇರಿದಂತೆ ಐವರು ಆಕಾಂಕ್ಷಿಗಳು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಕೊನೆಯ ಕ್ಷಣದಲ್ಲಿ ಇಬ್ಬರು ಪ್ರಬಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದ್ದು, ಅಂತಿಮ ಆಯ್ಕೆಯಲ್ಲಿ ಅಚ್ಚರಿಯ ತಿರುವು ಕಂಡು ಬರುವ ಸೂಚನೆಗಳು ಗೋಚರಿಸುತ್ತಿವೆ.
ಈ ನಡುವೆ ಸ್ಥಳೀಯ ಮಟ್ಟದಲ್ಲಿ ಹೈಕಮಾಂಡ್ ಆಗಿರುವ ಮಾಜಿ ಶಾಸಕ ಭೀಮಾನಾಯ್ಕ ಅವರ ನಿರ್ಧಾರವೇ ಕಾಂಗ್ರೆಸ್‌ನಲ್ಲಿ ಅಂತಿಮವಾಗಿದ್ದು, ಅವರ ಬೆಂಬಲ ಯಾರಿಗೆ ಸಿಗಲಿದೆ ಎಂಬ ಕುತೂಹಲ ತಾರಕಕ್ಕೇರಿದೆ.
ಈ ಚುನಾವಣೆಯಲ್ಲಿ ಹಣದ ಹರಿವು ಸಾಧ್ಯತೆ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಜೋರಾಗಿದ್ದು, ಈ ಕದನವು ಪ್ರತಿಷ್ಠಿತ ಹಾಗೂ ತೀವ್ರ ಪೈಪೋಟಿಯೊಂದಾಗಿ ರೂಪುಗೊಳ್ಳುವುದು ಖಚಿತವಾದಂತಾಗಿದೆ.



