ಲೇಹ್: ಲಡಾಖ್ನ ಲೇಹ್ ಪ್ರದೇಶದಲ್ಲಿ ಗುರುವಾರ ಮುಂಜಾನೆ 4.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕೆಲಕಾಲ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಮುಂಜಾನೆ ಸುಮಾರು 3:54ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಭೂಕಂಪದ ಕೇಂದ್ರಬಿಂದು ಲೇಹ್ನಲ್ಲಿ 150 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಇದು ಮಧ್ಯಮ ತೀವ್ರತೆಯ ಭೂಕಂಪವಾಗಿದ್ದು, ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಗಳು ಲಭ್ಯವಾಗಿಲ್ಲ.
ಭೂಕಂಪದ ಕಂಪನ ಅನುಭವವಾಗುತ್ತಿದ್ದಂತೆ ಮನೆಯೊಳಗಿದ್ದ ಹಲವರು ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಸಹಜಗೊಂಡಿದ್ದು, ಜನರು ತಮ್ಮ ಮನೆಗಳಿಗೆ ಮರಳಿದ್ದಾರೆ.
ಇದೇ ವೇಳೆ ಅಫ್ಘಾನಿಸ್ಥಾನದಲ್ಲಿಯೂ 4.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ಭೂಕಂಪದ ಪರಿಣಾಮ ಯಾವುದೇ ಗಂಭೀರ ಹಾನಿ ಉಂಟಾಗದಿದ್ದರೂ, ಮುಂಜಾನೆ ಸಂಭವಿಸಿದ ಈ ಕಂಪನ ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು.



