ಹಗರಿಬೊಮ್ಮನಹಳ್ಳಿ:- ತೀವ್ರ ಕುತೂಹಲ ಕೆರಳಿಸಿದ್ದ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದ್ದು, ರೇಷ್ಮಾ ಸಿಕಂದರ್ ಅವರು ಭರ್ಜರಿ ಜಯ ಸಾಧಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಪುರಸಭೆ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಯಿಂದಲೇ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದವು. ಬಿಸಿಲಿನ ತಾಪವನ್ನೂ ಲೆಕ್ಕಿಸದೆ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ನಾಮಪತ್ರ ಸಲ್ಲಿಕೆ ಸ್ವಲ್ಪ ತಡವಾಗಿ ನಡೆದರೂ, ಬಿಜೆಪಿ ಪರವಾಗಿ ಸುರೇಶ್ ಬಣಕಾರ ಹಾಗೂ ಕಾಂಗ್ರೆಸ್ ಪರವಾಗಿ ರೇಷ್ಮಾ ಸಿಕಂದರ್ ಸ್ಪರ್ಧಿಸಿದರು.
ಚುನಾವಣೆಯಲ್ಲಿ ಬಿಜೆಪಿ ಪರ 11 ಸದಸ್ಯರಲ್ಲಿ 8 ಮಂದಿ ಮಾತ್ರ ಭಾಗವಹಿಸಿದ್ದು, ಶಾಸಕರ ಒಂದು ಮತ ಸೇರಿ ಒಟ್ಟು 9 ಮತಗಳು ಲಭಿಸಿವೆ. ಕಾಂಗ್ರೆಸ್‌ನ 12 ಸದಸ್ಯರು ಹಾಗೂ ಸಂಸದ ಈ. ತುಕಾರಾಂ ಅವರ ಮತ ಸೇರಿ ರೇಷ್ಮಾ ಸಿಕಂದರ್ ಅವರಿಗೆ 13 ಮತಗಳು ಲಭಿಸಿ ಸ್ಪಷ್ಟ ಬಹುಮತದೊಂದಿಗೆ ಜಯ ಸಾಧಿಸಿದರು.
ಸಹಾಯಕ ಆಯುಕ್ತರು ಅಧಿಕೃತವಾಗಿ ಫಲಿತಾಂಶ ಘೋಷಿಸುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿತು. ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ರೇಷ್ಮಾ ಸಿಕಂದರ್ ಅವರು ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆದರು.
ಉಪಾಧ್ಯಕ್ಷರಾದ ನೇತ್ರಾವತಿ ಹುಚ್ಚಪ್ಪ ಸೇರಿದಂತೆ ಪವಾಡಿ ಹನುಮಂತಪ್ಪ, ಮರಿ ರಾಮಪ್ಪ, ಗಣೇಶ್, ರಾಜೇಶ್ ಬ್ಯಾಡಗಿ, ಅಜೀಜುಲ್ಲಾ, ಖಾಜಾ ಬನ್ನಿ ಅಲ್ಲಾಭಕ್ಷಿ, ಗುಂಡ್ಲು ಸರಸ್ವತಿ, ಮಂಜುಳಾ ಕೃಷ್ಣ ನಾಯ್ಕ, ಅಂಬಿಕಾ ದೇವಿಂದ್ರಪ್ಪ, ಇಸ್ಮಾಯಿಲ್ ಸಾಬ್, ಜೋಗಿ ಹನುಮಂತಪ್ಪ, ಕೆ.ಎಂ. ನವೀನ್ ಕುಮಾರ್, ದೀಪಕ್ ಕಠಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಿಜೆಪಿ ಸದಸ್ಯರಾದ ಮಲ್ಲೇಶ್ವರಿ ಭರತ್, ಎಚ್.ಎಂ. ಚೆನ್ನಮ್ಮ ವಿಜಯಕುಮಾರ್, ಭೋವಿ ವೀರೇಶ್ ಗೈರಾಗಿದ್ದರು.
ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ಕಾಂಗ್ರೆಸ್ ಗೆಲುವು ಸ್ಥಳೀಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ರಾಜಕಾರಣಕ್ಕೆ ವೇದಿಕೆ ಸಿದ್ಧವಾಗಿದೆ ಎಂಬ ಸಂದೇಶ ನೀಡಿದೆ.
ಈ ಬಗ್ಗೆ ಸಂಸದ ಈ. ತುಕಾರಾಂ ಮಾತನಾಡಿ, ಕಾಂಗ್ರೆಸ್ ಪಕ್ಷ ಯಾವಾಗಲೂ ಮಾತಿಗಿಂತ ಕೃತಿಗೆ ಆದ್ಯತೆ ನೀಡುತ್ತದೆ. ನಮ್ಮ ಪಕ್ಷ ತನ್ನದೇ ಆದ ಧ್ಯೇಯೋದ್ದೇಶಗಳಂತೆ ನಡೆದುಕೊಳ್ಳುತ್ತದೆ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಸಾಹಿರಾಬಾನು ಮಾತನಾಡಿ, “ಕಾಂಗ್ರೆಸ್ ಪಕ್ಷ ಮಹಿಳೆಯರ ಪರವಾಗಿದೆ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ. ರೇಷ್ಮಾ ಸಿಕಂದರ್ ಅಧ್ಯಕ್ಷೆಯಾಗಲು ಸಂಸದ ತುಕಾರಾಂ ಮತ್ತು ಭೀಮಾನಾಯ್ಕ ಅವರ ಪಾತ್ರ ಮಹತ್ತರವಾಗಿದೆ ಎಂದರು.
ನೂತನ ಅಧ್ಯಕ್ಷೆ ರೇಷ್ಮಾ ಸಿಕಂದರ್ ಮಾತನಾಡಿ, “ನನ್ನನ್ನು ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ, ಸಂಸದರು ಹಾಗೂ ಭೀಮಾನಾಯ್ಕ ಅವರಿಗೆ ನಾನು ಚಿರಋಣಿ. ಪುರಸಭೆಯ ಎಲ್ಲಾ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.



