ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪುರಸಭೆಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ರೇಷ್ಮಾ ಸಿಕಂದರ್ ಅವರಿಗೆ ಅಭಿನಂದನೆ ಸಲ್ಲಿಸಿದ ಬಳಿಕ, ಹಾಲಿ ಶಾಸಕ ನೇಮಿರಾಜ್ ನಾಯ್ಕ ವಿರುದ್ಧ ಗಂಭೀರ ಆರೋಪಗಳನ್ನು ಮಾಜಿ ಶಾಸಕ ಭೀಮಾನಾಯ್ಕ ಮಾಡಿದ್ದಾರೆ.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಜನರ ಸಹಾಯದಿಂದ ಅಧಿಕಾರಕ್ಕೆ ಬಂದ ಬಳಿಕ ಜನರನ್ನೇ ಮರೆತು, ಅಭಿವೃದ್ಧಿ ಕಾಮಗಾರಿಗಳಲ್ಲಿ 30% ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
2016ಕ್ಕೂ ಮೊದಲು ಚಿಂತರಪಳ್ಳಿ ಮತ್ತು ಹಗರಿಬೊಮ್ಮನಹಳ್ಳಿ ಗ್ರಾಮಪಂಚಾಯಿತಿಗಳು ದೇಶದಲ್ಲೇ ಅತಿ ದೊಡ್ಡ ಪಂಚಾಯಿತಿಗಳಾಗಿದ್ದು (82 ಸದಸ್ಯರು), ಅವುಗಳನ್ನು ತಮ್ಮ ಅವಧಿಯಲ್ಲಿ ರಾಜಕೀಯ ಇಚ್ಛಾಶಕ್ತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದರು. ಆ ನಂತರದಿಂದ ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ಜೋಗಿ ಹನುಮಂತಪ್ಪರಿಂದ ರೇಷ್ಮಾ ಸಿಕಂದರ್‌ವರೆಗೆ ಐದು ಕಾಂಗ್ರೆಸ್ ಅಧ್ಯಕ್ಷರು ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಹೆಬಿಟೇಟ್ ಕಂಪನಿಗೆ ಸುಮಾರು ₹200 ಕೋಟಿ ಅನುದಾನ ನೀಡಲಾಗಿದ್ದು, ಅದರಲ್ಲಿ ₹100 ಕೋಟಿ ಕಮಿಷನ್ ಪಡೆದಿರುವ ಆರೋಪವಿದೆ ಎಂದು ಹೇಳಿದರು. ಕ್ಷೇತ್ರಕ್ಕೆ ಬಂದ ₹25 ಕೋಟಿ ಅನುದಾನದಲ್ಲಿ ಬಹುಪಾಲು ಕೊಟ್ಟೂರು ಭಾಗಕ್ಕೆ ಮೀಸಲಿಟ್ಟಿದ್ದಾರೆ ಎಂದು ದೂರಿದರು. ವಿವಿಧ ಯೋಜನೆಗಳಿಂದ ಬಂದ ಸುಮಾರು ₹500 ಕೋಟಿ ಅನುದಾನ ಸರಿಯಾಗಿ ಬಳಕೆಯಾಗಿಲ್ಲ ಎಂದೂ ಆರೋಪಿಸಿದರು.
ಜಾಗಟಗೆರೆ–ರಾಮಪುರ ರಸ್ತೆ ಮೂರು ತಿಂಗಳಲ್ಲಿ ಹಾಳಾಗಿರುವುದು, ಮನೆ ಇಲ್ಲದ ಪ್ರದೇಶಗಳಲ್ಲಿ ಸಿಸಿ ರಸ್ತೆ ನಿರ್ಮಿಸಿರುವುದು ಸೇರಿದಂತೆ ಹಲವು ಉದಾಹರಣೆಗಳನ್ನು ಅವರು ನೀಡಿದರು. ಮಾಲವಿ ಜಲಾಶಯದ ಗೇಟ್ ಅಳವಡಿಕೆ ಕಾಮಗಾರಿಯಲ್ಲಿ ಕೂಡ 30% ಕಮಿಷನ್ ಬೇಡಿಕೆಯ ಕಾರಣ ಕೆಲಸ ವಿಳಂಬವಾಗಿದೆ ಎಂದು ಹೇಳಿದರು. ಈ ಎಲ್ಲ ವಿಷಯಗಳನ್ನು ಪರಿಶೀಲಿಸಿ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಸಾಹಿರಾಬಾನು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಕ್ಕಿ ತೋಟೇಶ, ಕಾಂಗ್ರೆಸ್ ಮುಖಂಡರಾದ ಬಿ. ಚಂದ್ರಪ್ಪ, ನಿಕಟಪೂರ್ವ ಪುರಸಭೆ ಅಧ್ಯಕ್ಷ ಎಂ. ಮರಿರಾಮಪ್ಪ, ಹಾಲ್ದಾಳ್ ವಿಜಯಕುಮಾರ್, ಹಿರಿಯ ಕಾಂಗ್ರೆಸ್ಸಿಗ ಹೆಗ್ಡಾಳ್, ಡಿಶ್ ಮಂಜುನಾಥ್, ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿಗೋಣಿಬಸಪ್ಪ, ಪುರಸಭಾ ಸದಸ್ಯ ಪವಾಡಿ ಹನುಮಂತಪ್ಪ, ಸೆರೆಗಾರ ಹುಚ್ಚಪ್ಪ, ಬಾಲಕೃಷ್ಣ ಬಾಬು, ಕರ್ಕೀಹಳ್ಳಿ ಚಂದ್ರಪ್ಪ, ಕೆಜಿಎನ್ ಅಲ್ಲಭಕ್ಷಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗುರುಬಸವರಾಜ ಸೊನ್ನದ, ಆರ್.ಎಸ್.ಎಸ್.ಎನ್. ಅಧ್ಯಕ್ಷ ದಾದಮ್ಮನವರ ಬಸವರಾಜ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಆರ್. ವೆಂಕಟೇಶ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
“ಅಭಿವೃದ್ಧಿ ಕಾಮಗಾರಿಗಳಲ್ಲಿ ಮುಂಗಡವಾಗಿ 30% ಕಮಿಷನ್ ಪಡೆದು ಕೆಲಸ ಮಾಡಲಾಗುತ್ತಿದೆ”
ಮಾಜಿ ಶಾಸಕ ಭೀಮಾನಾಯ್ಕ



