ಬೆಂಗಳೂರು: ರಸ್ತೆ ದಾಟಲು ಕಾಯುತ್ತಿದ್ದ ವೇಳೆ ತಲೆಸುತ್ತಿ ಬಿದ್ದ ವಿದ್ಯಾರ್ಥಿಯೊಬ್ಬ ಖಾಸಗಿ ಬಸ್‌ಗೆ ಸಿಲುಕಿ ಮೃತಪಟ್ಟಿರುವ ದುರ್ಘಟನೆ ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ವರುಣ್ (16) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ.
ತಂದೆಯ ಆರೋಗ್ಯ ಸರಿಯಿಲ್ಲದ ಹಿನ್ನೆಲೆ ಔಷಧಿ ತರಲು ವರುಣ್ ಮನೆಯಿಂದ ಹೊರಟಿದ್ದನು. ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ರಸ್ತೆ ದಾಟಲು ಕಾಯುತ್ತಿದ್ದ ವೇಳೆ ತಲೆಸುತ್ತಿ ಏಕಾಏಕಿ ಕೆಳಗೆ ಬಿದ್ದಿದ್ದಾನೆ. ಇದೇ ಸಂದರ್ಭದಲ್ಲಿ ಅಲ್ಲಿಂದ ಸಾಗುತ್ತಿದ್ದ ಖಾಸಗಿ ಬಸ್‌ನ ಅಡಿಗೆ ಸಿಲುಕಿದ್ದು, ಬಸ್ ತಲೆಯ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ಭೀಕರ ಅಪಘಾತದ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪರಿಶೀಲನೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಸಂಬಂಧ ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



