ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆ ವಿಚಾರದಲ್ಲಿ ಹೊಸ ರಾಜಕೀಯ ತಿರುವು ಕಾಣಿಸಿಕೊಂಡಿದೆ. ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದರೂ, ಈಗ ಬಿಜೆಪಿ ಆಡಳಿತದಲ್ಲೇ ವಿರೋಧದ ನಿರ್ಣಯ ಹೊರಬಿದ್ದಿದೆ.
ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಪ್ರತ್ಯೇಕ ಪಾಲಿಕೆ ಬೇಡ ಎಂದು ಸ್ಪಷ್ಟ ನಿರ್ಣಯ ಕೈಗೊಂಡಿದ್ದು, ಬದಲಾಗಿ ಇಡೀ ಅವಳಿ ನಗರವನ್ನು “ಬೃಹತ್ ಮಹಾನಗರ ಪಾಲಿಕೆ” ಆಗಿಯೇ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ. ಈ ನಿರ್ಧಾರ ಧಾರವಾಡ ಭಾಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
82 ವಾರ್ಡ್‌ಗಳು ಹಾಗೂ 13 ಲಕ್ಷ ಜನಸಂಖ್ಯೆಯಿರುವ ಈ ಪಾಲಿಕೆಯಲ್ಲಿ ಧಾರವಾಡಕ್ಕೆ ಅನುದಾನ ಕಡಿಮೆ ಸಿಗುತ್ತಿದೆ ಎಂಬುದು ದೀರ್ಘಕಾಲದ ಆರೋಪವಾಗಿತ್ತು. ಇದೇ ಕಾರಣದಿಂದಲೇ ಪ್ರತ್ಯೇಕ ಪಾಲಿಕೆ ಬೇಡಿಕೆ ಬಲವಾಗಿತ್ತು.
ಆದರೆ ಬಿಜೆಪಿ ವಾದದ ಪ್ರಕಾರ, ವಿಭಜನೆಯಾದರೆ ಎರಡೂ ಪಾಲಿಕೆಗಳ ಜನಸಂಖ್ಯೆ 10 ಲಕ್ಷಕ್ಕಿಂತ ಕೆಳಗೆ ಇಳಿಯಲಿದೆ. ಇದರಿಂದ ಕೇಂದ್ರದ 16ನೇ ಹಣಕಾಸು ಆಯೋಗದಿಂದ ಬರುವ ಸಾವಿರಾರು ಕೋಟಿ ಅನುದಾನಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ಇದಲ್ಲದೆ, ಧಾರವಾಡಕ್ಕೆ ಸೇರಿಸಬೇಕಿದ್ದ ಗ್ರಾಮ ಪಂಚಾಯತ್‌ಗಳ ವಿರೋಧ, ಹಾಗೂ ಆಡಳಿತಾತ್ಮಕ ಗೊಂದಲಗಳು ಯೋಜನೆಗೆ ಅಡ್ಡಿಯಾಗಿವೆ.
ಮೈಸೂರು ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆ ಮಾಡುವ ಸರ್ಕಾರದ ಯೋಜನೆಯ ನಡುವೆಯೇ, ಹುಬ್ಬಳ್ಳಿ-ಧಾರವಾಡ ವಿಚಾರವು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



