ವಿಜಯಸಾಕ್ಷಿ ಸುದ್ದಿ, ಧಾರವಾಡ: ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರ್ಯಾಪಿಡ್ ಮತ್ತು ವಿದ್ಯಾಪೋಷಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ನಗರದ ಕೆ.ಎಚ್. ಕಬ್ಬೂರ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್, ಜೆಎಸ್ಎಸ್ ಕಾಲೇಜು ಕ್ಯಾಂಪಸ್ನ ಪ್ರೇರಣಾ ಹಾಲ್ನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಐಐಟಿ ಪ್ರಾಧ್ಯಾಪಕ ಹಾಗೂ ಮೈಂಡ್ ವೇವ್ ಎಜುಕೇಶನ್ ಹಬ್ನ ಪ್ರಮುಖರಾದ ಪ್ರೊ. ಎಸ್.ಎಂ. ಶಿವಪ್ರಸಾದ್ ಹಾಗೂ ವಿದ್ಯಾಪೋಷಕ ಸಂಸ್ಥೆಯ ಸಿಇಒ ಡಾ. ಶರತ್ ಐರಣಿ ಅವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಣವೇ ಉತ್ತಮ ಭವಿಷ್ಯದ ಅಡಿಪಾಯವಾಗಿದ್ದು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ರ್ಯಾಪಿಡ್ ಸಂಸ್ಥೆಯ ವಾಣಿಶ್ರೀ ಪುರೋಹಿತ ಮಾತನಾಡಿ, ಆರ್ಥಿಕ ನೆರವು ವಿದ್ಯಾರ್ಥಿನಿಯರ ಶೈಕ್ಷಣಿಕ ಕನಸುಗಳಿಗೆ ಹೊಸ ಬಲ ನೀಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ 81 ವಿದ್ಯಾರ್ಥಿನಿಯರಿಗೆ ಒಟ್ಟು ₹7.77 ಲಕ್ಷ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಸನದ ಕುರಿತು ಪ್ರಸಿದ್ಧ ಪ್ರೇರಣಾದಾಯಕ ವಾಗ್ಮಿ ಹಾಗೂ ಸಂಪನ್ಮೂಲ ವ್ಯಕ್ತಿ ಪ್ರವೀಣ ಗುಡಿ ಅವರು “Stop Impressing, Start Inspiring” ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ವಿದ್ಯಾಪೋಷಕ ಸಂಸ್ಥೆಯ ರತ್ನಾ ಹಿಪ್ಪರಗಿ, ಸಂಸ್ಥೆಯ ಸಿಬ್ಬಂದಿ, ರ್ಯಾಪಿಡ್ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.



