ಬೆಂಗಳೂರು: ಅಕ್ರಮ ಸಂಬಂಧ ಬಯಲಾದ ನಂತರ ತನ್ನ ಆರು ತಿಂಗಳ ಗರ್ಭಿಣಿ ಪತ್ನಿಯನ್ನೇ ಮನೆಯಿಂದ ಹೊರಹಾಕಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬಿಎಂಟಿಸಿ ಸೆಕ್ಯೂರಿಟಿ ಇನ್‌ಚಾರ್ಜ್ ಜಗದೀಪ್ (42) ವಿರುದ್ಧ ಪತ್ನಿ ಶ್ವೇತಾ (32) ಗಂಭೀರ ಆರೋಪಗಳನ್ನು ಮಾಡಿದ್ದಾರೆ.
14 ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿದ್ದ ಈ ದಂಪತಿಗಳು ಜಯನಗರ ಸರ್ಕಾರಿ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು. ಆದರೆ ಇತ್ತೀಚೆಗೆ ಪತಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದ್ದು, ಶ್ವೇತಾ ಅನುಮಾನಗೊಂಡಿದ್ದಾರೆ.
ವಾಟ್ಸಾಪ್ ಸಂದೇಶಗಳ ಪರಿಶೀಲನೆಯಲ್ಲಿ ಜಗದೀಪ್‌ಗೆ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರುವ ವಿಷಯ ಬೆಳಕಿಗೆ ಬಂದಿದೆ. ಪ್ರಶ್ನಿಸಿದ ವೇಳೆ ಪತ್ನಿಯ ಮೇಲೆ ಹಲ್ಲೆ ನಡೆದಿದ್ದು, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಆರು ತಿಂಗಳ ಗರ್ಭಿಣಿಯಾಗಿರುವ ಶ್ವೇತಾಗೆ “ಮಗು ತೆಗೆಸಿಬಿಡು, ನೀನು ನನಗೆ ಬೇಡ” ಎಂದು ಹೇಳಿ ಮನೆಯಿಂದ ಹೊರಹಾಕಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಈಗ ಪತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶ್ವೇತಾ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.



