ಕಾರವಾರ: ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆ ಮತ್ತೆ ತಲೆಎತ್ತಿರುವ ಬೆನ್ನಲ್ಲೇ ಉತ್ತರ ಕನ್ನಡ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಮೀಟರ್ ಬಡ್ಡಿ ದಂಧೆಯ ಪ್ರಮುಖ ಮುಖಂಡ ಜಮೀರ್ ಅಹ್ಮದ್ ದರ್ಗಾವಾಲೆ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದರೆ, ಇದೀಗ ಅದರ ಹಿಂದಿನ ಜಾಲವನ್ನು ಬಯಲಿಗೆಳೆಯಲು ಪೊಲೀಸರು ದೊಡ್ಡ ಮಟ್ಟದ ತನಿಖೆ ಆರಂಭಿಸಿದ್ದಾರೆ.
ಜಮೀರ್ ಕೊಲೆ ಪ್ರಕರಣದಲ್ಲಿ ಈಗಾಗಲೇ 7 ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ನಡೆಸುತ್ತಿರುವ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ತಂಡ, ಕೊಲೆ ಮತ್ತು ಮೀಟರ್ ಬಡ್ಡಿ ವ್ಯವಹಾರಗಳ ನಡುವಿನ ನಂಟಿನ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ.
ಇದೀಗ ಎಸ್ಪಿ ದೀಪನ್ ನೇರವಾಗಿ ಮೈದಾನಕ್ಕಿಳಿದು ಮುಂಡಗೋಡು, ಹಳಿಯಾಳ ಹಾಗೂ ದಾಂಡೇಲಿ ಭಾಗಗಳಲ್ಲಿ ಸಕ್ರಿಯವಾಗಿರುವ ದಂಧೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಸಜ್ಜಾಗಿದ್ದಾರೆ. ಕೆಲವರನ್ನು ಗಡಿಪಾರು ಮಾಡಲು ಸಿದ್ಧತೆ ನಡೆದಿದ್ದು, ವಾರದೊಳಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಇನ್ನೊಂದೆಡೆ, ಜಮೀರ್ ಜೊತೆ ಕೆಲ ಸ್ಥಳೀಯ ಪೊಲೀಸರ ಸಂಪರ್ಕವಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಜಮೀರ್ ಮೊಬೈಲ್ ಕಾಲ್ ಡೀಟೇಲ್ಸ್ ಮತ್ತು ವಾಟ್ಸಪ್ ಚಾಟ್‌ಗಳ ಪರಿಶೀಲನೆಗೆ ಎಸ್ಪಿ ದೀಪನ್ ಸೂಚನೆ ನೀಡಿದ್ದಾರೆ.
ಈ ಬೆಳವಣಿಗೆಗಳಿಂದ ಜಮೀರ್ ಜೊತೆ ಸಂಪರ್ಕದಲ್ಲಿದ್ದರೆನ್ನಲಾದ ಕೆಲ ಪೊಲೀಸರಲ್ಲಿ ಭಾರೀ ಆತಂಕ ಶುರುವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ವಿರುದ್ಧ ಇದೀಗ ಪೊಲೀಸ್ ಇಲಾಖೆ ಸಂಪೂರ್ಣ ಸಮರ ಘೋಷಿಸಿದಂತಾಗಿದೆ.



