ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಟುಗಾ ಗ್ರಾಮದ ಸಮೀಪ ಇಂದು ಭಾರೀ ಅವಘಡವೊಂದು ಸಂಭವಿಸಿದ್ದು, ಕೈಗಾ ಅಣುಸ್ಥಾವರಕ್ಕೆ ಸಾಗಿಸಲಾಗುತ್ತಿದ್ದ ಮಹತ್ವದ ಉಪಕರಣ ಹೊತ್ತ ಭಾರೀ ವಾಹನ ಪಲ್ಟಿಯಾಗಿದೆ.
ಕೈಗಾ ಅಣುಸ್ಥಾವರದ 5 ಹಾಗೂ 6ನೇ ಘಟಕಗಳ ನಿರ್ಮಾಣ ಕಾಮಗಾರಿಗಾಗಿ ಸೂರತ್‌ನಿಂದ ವಿಶೇಷ ರೀತಿಯಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 140 ಟನ್ ತೂಕದ ವಿಕಿರಣ ರಕ್ಷಾ ಕವಚವನ್ನು ಹೊತ್ತಿದ್ದ ವಾಹನವೇ ಅಪಘಾತಕ್ಕೀಡಾಗಿದೆ.
ಅತ್ಯಂತ ಭದ್ರತಾ ಕ್ರಮಗಳೊಂದಿಗೆ ರಸ್ತೆಯ ಮೂಲಕ ಸಾಗಿಸಲಾಗುತ್ತಿದ್ದ ಈ ಭಾರೀ ವಾಹನ ಮಲೆನಾಡಿನ ತಿರುವುಮಯ ರಸ್ತೆಯಲ್ಲಿ ಸಾಗುವಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಸ್ಥಳೀಯರು ಆತಂಕಕ್ಕೊಳಗಾದರು. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಸೋರಿಕೆ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೈಗಾ ಅಣುಸ್ಥಾವರದ ವಿಸ್ತರಣಾ ಯೋಜನೆಗೆ ಈ ವಿಕಿರಣ ರಕ್ಷಾ ಕವಚ ಅತ್ಯಂತ ಪ್ರಮುಖವಾಗಿದ್ದು, ಇದರ ಸುರಕ್ಷಿತ ಸಾಗಣೆಗೆ ವಿಶೇಷ ತಾಂತ್ರಿಕ ವ್ಯವಸ್ಥೆ ಮಾಡಲಾಗಿತ್ತು. ಆದರೆ ದುರ್ಗಮ ಹಾಗೂ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಸಾಗುವ ವೇಳೆ ವಾಹನ ಸಮತೋಲನ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಕಾರ್ಯಾಚರಣೆ ಸಂಕೀರ್ಣಗೊಂಡಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಕೈಗಾ ಅಣುಸ್ಥಾವರದ ಹಿರಿಯ ಅಧಿಕಾರಿಗಳು, ತಾಂತ್ರಿಕ ತಜ್ಞರ ತಂಡ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸುಮಾರು 140 ಟನ್ ಭಾರ ಇರುವ ವಾಹನವನ್ನು ಮೇಲಕ್ಕೆತ್ತಲು ಬೃಹತ್ ಸಾಮರ್ಥ್ಯದ ಕ್ರೇನ್‌ಗಳನ್ನು ಕರೆಸುವ ಕಾರ್ಯ ನಡೆಯುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಈ ಘಟನೆ ಹಿನ್ನೆಲೆ ಕೈಗಾ ಅಣುಸ್ಥಾವರದ ಭದ್ರತೆ ಹಾಗೂ ಭಾರೀ ಉಪಕರಣಗಳ ಸಾಗಣೆ ಕ್ರಮಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.



