ಗದಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದು, ಮನುಷ್ಯರಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳೂ ನೀರಿನ ಕೊರತೆಯಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ರಸ್ತೆಯಲ್ಲಿ ನೀರಿಗಾಗಿ ಮಂಗಗಳು ಪರದಾಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೇಸಿಗೆಯ ತೀವ್ರ ಉಷ್ಣತೆಯಿಂದ ನೀರು ಮತ್ತು ಆಹಾರದ ಅಭಾವ ಎದುರಿಸುತ್ತಿರುವ ಎರಡು ಮಂಗಗಳು ರಸ್ತೆ ಬದಿಯ ತಗ್ಗಿನಲ್ಲಿ ನಿಂತಿದ್ದ ನೀರನ್ನು ಕುಡಿಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ದಾಹದಿಂದ ಅಲೆದಾಡುತ್ತಿದ್ದ ಮಂಗಗಳು ಕೊನೆಗೆ ರಸ್ತೆ ಬದಿಯ ನೀರನ್ನೇ ಕುಡಿದು ತಾವು ತಣಿಸಿಕೊಂಡಿರುವ ದೃಶ್ಯ ಮನಕಲುಕುವಂತಾಗಿದೆ.
ಬಿರು ಬೇಸಿಗೆಯಿಂದಾಗಿ ಪ್ರಾಣಿ ಹಾಗೂ ಪಕ್ಷಿಗಳಿಗೆ ನೀರಿನ ಕೊರತೆ ತೀವ್ರವಾಗುತ್ತಿದ್ದು, ಆಹಾರ ಮತ್ತು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದೃಶ್ಯ ಸಾರ್ವಜನಿಕರಲ್ಲಿ ಆಘಾತ ಮೂಡಿಸಿದ್ದು, ಪ್ರಾಣಿ-ಪಕ್ಷಿಗಳಿಗಾಗಿ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ.



