ಬಳ್ಳಾರಿ: ಪೊಲೀಸ್ ಇಲಾಖೆಯ ಪ್ರತಿಷ್ಠೆಗೆ ಧಕ್ಕೆ ತರುವಂತಹ ಪ್ರಕರಣವೊಂದು ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದ್ದು, ಜಿಲ್ಲಾ ಎಸ್ಪಿ ಗನ್‌ಮ್ಯಾನ್ ದೇವರಾಜ್ ಅಕ್ರಮ ಪಡಿತರ ಅಕ್ಕಿ ಸಾಗಾಣೆದಾರರಿಂದ ಹಣ ಸುಲಿಗೆ ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾನೆ. ಮೋಕಾ ಪೊಲೀಸರು ದೇವರಾಜ್ ಮತ್ತು ಆತನ ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಆರೋಪಿಗಳ ತಂಡ ಮಡಕೇರಿಯಿಂದ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ಎರಡು ಅಕ್ಕಿ ಲಾರಿಗಳನ್ನು ಅಡ್ಡಗಟ್ಟಿ, ತಾವು ‘ಎಸ್ಪಿ ಸ್ಕ್ವಾಡ್’ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಲಾರಿಗಳನ್ನು ಜಪ್ತಿ ಮಾಡಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ಐದು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಕೊನೆಗೆ ಮೂರು ಲಕ್ಷ ರೂಪಾಯಿ ಪಡೆದು ವಾಹನಗಳನ್ನು ಬಿಟ್ಟುಕೊಟ್ಟಿದ್ದಾರೆ ಎಂದು ದೂರುದಾರ ಶರಭಯ್ಯ ಆರೋಪಿಸಿದ್ದಾರೆ.
ಮೋಕಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು, ಗನ್‌ಮ್ಯಾನ್ ದೇವರಾಜ್ ನೇರವಾಗಿ ಹಣ ವಸೂಲಿಯಲ್ಲಿ ಭಾಗಿಯಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಪ್ರಕರಣ ಗಂಭೀರವಾಗುತ್ತಿದ್ದಂತೆ ಜಿಲ್ಲಾ ಎಸ್ಪಿ ಸುಮನ್ ಡಿ. ಪನ್ನೇಕರ್ ತಕ್ಷಣ ಕ್ರಮ ಕೈಗೊಂಡು ಆರೋಪಿಗಳ ಬಂಧನಕ್ಕೆ ಸೂಚನೆ ನೀಡಿದ್ದಾರೆ.
ಸದ್ಯ ಆರೋಪಿಗಳ ವಿರುದ್ಧ ಸುಲಿಗೆ, ಬೆದರಿಕೆ ಹಾಗೂ ಅಧಿಕಾರದ ದುರುಪಯೋಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಅಕ್ರಮ ವಸೂಲಿಯಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ವಿಸ್ತರಿಸಿದ್ದಾರೆ.



