ಬೆಳಿಗ್ಗೆ ಎದ್ದ ತಕ್ಷಣ ದವಡೆ ನೋವು ಅಥವಾ ಹಲ್ಲು ನೋವು ಅನುಭವಿಸುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ತಜ್ಞರ ಪ್ರಕಾರ, ಇದಕ್ಕೆ ಪ್ರಮುಖ ಕಾರಣ ರಾತ್ರಿ ನಿದ್ರೆಯಲ್ಲಿರುವಾಗ ಅರಿವಿಲ್ಲದೆ ಹಲ್ಲು ಕಡಿಯುವ ಅಭ್ಯಾಸವಾಗಿದೆ. ಜಗತ್ತಿನಾದ್ಯಂತ ಸುಮಾರು 10ರಿಂದ 36 ಶೇಕಡಾ ಜನರು ಒತ್ತಡ ಮತ್ತು ಮಾನಸಿಕ ಚಿಂತೆಯಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸಿವೆ.
ರಾತ್ರಿ ಮಲಗುವ ವೇಳೆ ಒತ್ತಡ ಅಥವಾ ಅತಿಯಾದ ಆಲೋಚನೆಗಳಿಂದ ಅನೇಕರು ತಿಳಿಯದೆ ಹಲ್ಲುಗಳನ್ನು ಬಿಗಿಯಾಗಿ ಒತ್ತುತ್ತಾರೆ ಅಥವಾ ಕಡಿಯುತ್ತಾರೆ. ಈ ನಿರಂತರ ಘರ್ಷಣೆಯಿಂದ ಹಲ್ಲಿನ ಮೇಲಿನ ದಂತಕವಚ ಪದರ ಹಾನಿಗೊಳಗಾಗುತ್ತದೆ. ಪರಿಣಾಮವಾಗಿ ಹಲ್ಲುಗಳು ನಿಧಾನವಾಗಿ ದುರ್ಬಲಗೊಳ್ಳುವ ಸಾಧ್ಯತೆ ಇರುತ್ತದೆ.
ಬೆಳಿಗ್ಗೆ ಎದ್ದಾಗ ದವಡೆಯಲ್ಲಿ ಬಿಗಿತ, ಹಲ್ಲು ನೋವು ಅಥವಾ ದವಡೆ ನೋವು ಕಾಣಿಸಿಕೊಳ್ಳುವುದು ಈ ಸಮಸ್ಯೆಯ ಪ್ರಮುಖ ಲಕ್ಷಣಗಳಾಗಿವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಹಲ್ಲು ಸವೆತ, ಒಸಡು ಸಮಸ್ಯೆಗಳು ಸೇರಿದಂತೆ ಹಲವು ತೊಂದರೆಗಳು ಉಂಟಾಗಬಹುದು ಎಂದು ದಂತ ತಜ್ಞರು ಎಚ್ಚರಿಸಿದ್ದಾರೆ.
ಈ ಸಮಸ್ಯೆಯಿಂದ ಹಲ್ಲುಗಳನ್ನು ರಕ್ಷಿಸಲು ‘ಮೌತ್ ಗಾರ್ಡ್’ ಬಳಕೆ ಪರಿಣಾಮಕಾರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಮಲಗುವ ಮುನ್ನ ಮೌತ್ ಗಾರ್ಡ್ ಧರಿಸುವುದರಿಂದ ಮೇಲಿನ ಮತ್ತು ಕೆಳಗಿನ ಹಲ್ಲುಗಳು ನೇರವಾಗಿ ತಾಕುವುದನ್ನು ತಡೆಯಬಹುದು. ಇದರಿಂದ ಹಲ್ಲುಗಳ ನಡುವಿನ ಘರ್ಷಣೆ ಕಡಿಮೆಯಾಗಿ, ಹಲ್ಲು ಸವೆತ ತಡೆಯಲು ಸಹಕಾರಿಯಾಗುತ್ತದೆ.
ತಜ್ಞರ ಪ್ರಕಾರ, ಒತ್ತಡವನ್ನು ನಿಯಂತ್ರಿಸುವುದೇ ಈ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರವಾಗಿದೆ. ಪ್ರತಿದಿನ ನಿಯಮಿತ ವ್ಯಾಯಾಮ ಮಾಡುವುದು, ಧ್ಯಾನ ಹಾಗೂ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದು ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತದೆ.
ಇದಲ್ಲದೆ, ಮಲಗುವ ಮೊದಲು ಹಾಸ್ಯ ಕಾರ್ಯಕ್ರಮಗಳು ಅಥವಾ ಮನರಂಜನೆಯ ಚಲನಚಿತ್ರಗಳನ್ನು ವೀಕ್ಷಿಸುವುದು ಒತ್ತಡ ಕಡಿಮೆ ಮಾಡಲು ಸಹಕಾರಿ ಎಂದು ವೈದ್ಯರು ತಿಳಿಸಿದ್ದಾರೆ.
ಆರೋಗ್ಯಕರ ಹಲ್ಲುಗಳು ಕೇವಲ ಬಾಯಿಯ ಆರೋಗ್ಯಕ್ಕಷ್ಟೇ ಅಲ್ಲ, ದೇಹದ ಒಟ್ಟಾರೆ ಆರೋಗ್ಯಕ್ಕೂ ಅಗತ್ಯವಾಗಿರುವುದರಿಂದ ಒತ್ತಡವನ್ನು ನಿಯಂತ್ರಿಸಿ ಸರಿಯಾದ ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.



