ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಕಾರವಾರ ಮೂಲದ ಪರ್ಷಿಯನ್ ಮಾದರಿಯ ಮೀನುಗಾರಿಕಾ ಬೋಟ್ ಗೋವಾ ಸಮುದ್ರ ಪ್ರದೇಶದಲ್ಲಿ ಮುಳುಗಿದ ಘಟನೆ ನಡೆದಿದೆ.
ಗೋವಾದ ಬೇತುಲ್ ಸಮುದ್ರ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದ್ದು, ಬೋಟ್ನಲ್ಲಿದ್ದ 22 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಸಮೀಪದಲ್ಲೇ ಮೀನುಗಾರಿಕೆಯಲ್ಲಿ ತೊಡಗಿದ್ದ ಇತರೆ ಬೋಟ್ಗಳ ಮೀನುಗಾರರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನು ಕಾಪಾಡಿದ್ದಾರೆ ಎಂದು ತಿಳಿದುಬಂದಿದೆ.
ಕಾರವಾರ ತಾಲೂಕಿನ ಮುದಗಾ ಗ್ರಾಮದ ದಿನೇಶ್ ಕಾಂಚನ್ ಅವರಿಗೆ ಸೇರಿದ ‘ಶ್ರೀ ಅಮ್ಮ’ ಹೆಸರಿನ ಪರ್ಷಿಯನ್ ಮಾದರಿಯ ಬೋಟ್ ಒಂದು ವಾರದ ಹಿಂದೆ ಮುದಗಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು.
ಬೋಟ್ ಮುಳುಗಡೆಯಿಂದ ಬೋಟ್ ಹಾಗೂ ಮೀನುಗಾರಿಕಾ ಬಲೆ ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.



