ಮಂಗಳೂರು: ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಜಮೆಯಾಗುತ್ತಿಲ್ಲ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳಿಬರುತ್ತಿರುವ ನಡುವೆಯೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ದೊಡ್ಡ ಎಡವಟ್ಟು ಬೆಳಕಿಗೆ ಬಂದಿದೆ. ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸುಮಾರು 22 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿರುವುದು ಜಿಲ್ಲಾ ಮಟ್ಟದ ಸಭೆಯಲ್ಲಿ ಬಹಿರಂಗವಾಗಿದೆ.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನಾ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ಅಧ್ಯಕ್ಷ ಭರತ್ ಮುಂಡೋಡಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೃತ ಫಲಾನುಭವಿಗಳ ಖಾತೆಗಳಿಗೆ ಜಮೆಯಾದ ಹಣವನ್ನು ಸರ್ಕಾರಕ್ಕೆ ಮರಳಿ ಪಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಬಳಕೆಯಲ್ಲಿಲ್ಲದ ಖಾತೆಗಳಿಗೂ ಹಣ ವರ್ಗಾವಣೆ ಮುಂದುವರಿದಿರುವ ಬಗ್ಗೆ ರಾಜ್ಯ ಕಚೇರಿಯಿಂದ ಮಾಹಿತಿ ಬಂದಿದ್ದು, ಮೃತರ ವಿವರಗಳನ್ನು ಸಂಗ್ರಹಿಸಿ ಬ್ಯಾಂಕ್‌ಗಳ ಮೂಲಕ ಖಾತೆಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ.
ಸಭೆಯಲ್ಲಿ ಮತ್ತೊಂದು ಆತಂಕಕಾರಿ ಅಂಶವೂ ಬೆಳಕಿಗೆ ಬಂದಿದೆ. ಕೆಲವು ಜೀವಂತ ಫಲಾನುಭವಿಗಳನ್ನು ಇಲಾಖೆಯ ದಾಖಲೆಗಳಲ್ಲಿ ಮೃತಪಟ್ಟವರು ಎಂದು ನಮೂದಿಸಿರುವ ಗಂಭೀರ ದೋಷಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿ ಮುಂದಿನ ಸಭೆಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 4,25,759 ರೇಷನ್ ಕಾರ್ಡ್ ಹೊಂದಿದವರಿದ್ದು, ಅವರಲ್ಲಿ 3,82,178 ಮಂದಿ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿತರಾಗಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗಳಲ್ಲಿರುವ ಮರಣ ದಾಖಲೆಗಳನ್ನು ಆಧರಿಸಿ ಸ್ಥಳೀಯ ಆಡಳಿತ ಹಾಗೂ ಬ್ಯಾಂಕ್‌ಗಳ ಸಹಯೋಗದಲ್ಲಿ ಮುಂದಿನ ಹಣ ವರ್ಗಾವಣೆಯನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.



