ವಿಜಯಸಾಕ್ಷಿ ಸುದ್ದಿ, ಡಂಬಳ: ಡಂಬಳ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ಆಗ್ರಹಿಸಿ ಸರ್ವೋದಯ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವಿವಿಧೋದ್ದೇಶಗಳ ಸಂಸ್ಥೆ ಮತ್ತು ಅಹಿಂದ ಜನತಾ ಸಂಘದ ಸಹಯೋಗದಲ್ಲಿ ಶುಕ್ರವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಜಿಲ್ಲಾ ವೈದ್ಯಾಧಿಕಾರಿ ಎಸ್.ಎಸ್. ನೀಲಗುಂದ ಹಾಗೂ ಉಪ ತಹಸೀಲ್ದಾರ್ ಎಸ್.ಎಚ್. ಬಿಚ್ಚಾಲಿ ಅವರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆರಂಭವಾದ ಪ್ರತಿಭಟನೆ ಮುಖ್ಯ ಬಜಾರ್, ಬಸವೇಶ್ವರ ವೃತ್ತ ಮೂಲಕ ನಾಡಕಚೇರಿವರೆಗೆ ಸಾಗಿತು.
ಈ ವೇಳೆ ಮಾತನಾಡಿದ ಸರ್ವೋದಯ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವಿವಿಧೋದ್ದೇಶಗಳ ಸಂಸ್ಥೆಯ ಕಾರ್ಯದರ್ಶಿ ಗುಡದಪ್ಪ ತಳಗೇರಿ, “ಡಂಬಳ ಗ್ರಾಮದಲ್ಲಿ ಬಡವರು, ರೈತರು, ಕೂಲಿ ಕಾರ್ಮಿಕರು ಸಮರ್ಪಕ ವೈದ್ಯಕೀಯ ಸೇವೆ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ‘ಆಟಕ್ಕುಂಟು ಲೆಕ್ಕಕ್ಕೆ ಇಲ್ಲ’ ಎಂಬಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುರ್ತು ಚಿಕಿತ್ಸೆಗೆ ಅಂಬುಲೆನ್ಸ್ ಸಿಗದೇ ಮೃತಪಟ್ಟ ಸಂತೋಷನ ಸಾವಿಗೆ ನ್ಯಾಯ ಸಿಗಬೇಕು. 28 ಗ್ರಾಮಗಳನ್ನು ಒಳಗೊಂಡ ಡಂಬಳ ಹೋಬಳಿಯ ಜನರು ಆರೋಗ್ಯ ಸೇವೆಗೆ ಪರದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ತುರ್ತು ಚಿಕಿತ್ಸೆ ಸಿಗದೇ ಸಾವು-ನೋವುಗಳು ಸಂಭವಿಸುತ್ತಿದ್ದು, ಇದಕ್ಕೆ ಸರ್ಕಾರ ಹಾಗೂ ಸ್ಥಳೀಯ ಶಾಸಕರ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.
ಅಹಿಂದ ಜನತಾ ಸಂಘದ ಅಧ್ಯಕ್ಷ ಪ್ರಕಾಶ ಮೇಗೂರ ಹಾಗೂ ಯುವ ಮುಖಂಡ ಗೋಪಾಲ ಗದಗಿನ ಮಾತನಾಡಿ, ಆಸ್ಪತ್ರೆಯಲ್ಲಿ ತುರ್ತು ಅಂಬುಲೆನ್ಸ್ ಸೇವೆ ಒದಗಿಸಬೇಕು. ಹಗಲು-ರಾತ್ರಿ ವೈದ್ಯರು ಸ್ಥಳೀಯವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಸಂತೋಷ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಲಕ್ಷ್ಮಣ ದೊಡ್ಡಮನಿ ಮಾತನಾಡಿ, “ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಅಧಿಕಾರಿಗಳು ಕಾನೂನಿನ ನೆಪ ಹೇಳುತ್ತಿರುವುದು ಜನಸಾಮಾನ್ಯರಿಗೆ ಮಾಡುತ್ತಿರುವ ದ್ರೋಹ” ಎಂದು ಕಿಡಿಕಾರಿದರು.
15 ದಿನಗಳೊಳಗೆ ಸಮುದಾಯ ಆರೋಗ್ಯ ಕೇಂದ್ರ ಮಂಜೂರಾಗದಿದ್ದರೆ ಪ್ರಾಥಮಿಕ ಆರೋಗ್ಯ ಕೇಂದ್ರ ಬಂದ್ ಮಾಡಿ ಡಂಬಳದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನೂರಾರು ಯುವಕರೊಂದಿಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ಎಸ್.ಎಸ್. ನೀಲಗುಂದ, “ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಮೂರು-ನಾಲ್ಕು ತಿಂಗಳಲ್ಲಿ ಮಂಜೂರಾಗುವ ನಿರೀಕ್ಷೆ ಇದೆ” ಎಂದು ಭರವಸೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ವೈದ್ಯರು, ಸಿಬ್ಬಂದಿ ಹಾಗೂ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ರೈತರು, ಹಸಿರು ಸೇನೆ, ತುಂಗಭದ್ರಾ, ಡಿಎಸ್‌ಎಸ್ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
“15 ದಿನಗಳೊಳಗೆ ಸಮುದಾಯ ಆರೋಗ್ಯ ಕೇಂದ್ರ ಮಂಜೂರು ಮಾಡದಿದ್ದರೆ ಡಂಬಳದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಗುವುದು.”
ಗುಡದಪ್ಪ ತಳಗೇರಿ
ಕಾರ್ಯದರ್ಶಿ, ಸರ್ವೋದಯ ಸಂಸ್ಥೆ



