ವಿಜಯಸಾಕ್ಷಿ ಸುದ್ದಿ, ಗದಗ: ಮೈಸೂರು–ಹಜರತ್ ನಿಜಾಮುದ್ದೀನ್ ಹಾಗೂ ಯಶವಂತಪುರ–ವಿಜಯಪುರ ವಿಶೇಷ ರೈಲುಗಳನ್ನು ಗದಗ ಬೈಪಾಸ್ ಮೂಲಕ ಸಂಚರಿಸಿ, ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ನೀಡದಿರುವ ಕ್ರಮಕ್ಕೆ ಪ್ರಯಾಣಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ತಕ್ಷಣವೇ ಗದಗ ಮೇನ್ ಜಂಕ್ಷನ್ ಹಾಗೂ ಬಾಗಲಕೋಟೆ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಬೇಕೆಂದು ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಆಗ್ರಹಿಸಿದ್ದಾರೆ.
ದಿ. 16ರಂದು ಸಂಜೆ 6.15ಕ್ಕೆ ಸಂಚರಿಸಿದ ಯಶವಂತಪುರ–ವಿಜಯಪುರ ವಿಶೇಷ ರೈಲು ಹಾಗೂ ದಿ. 21ರಂದು ಮುಂಜಾನೆ 4 ಗಂಟೆಗೆ ಸಂಚರಿಸಲಿರುವ ಮೈಸೂರು–ಹಜರತ್ ನಿಜಾಮುದ್ದೀನ್ ವಿಶೇಷ ರೈಲುಗಳು ಗದಗ ಬೈಪಾಸ್ ಮೂಲಕ ಸಂಚಾರ ಮಾಡುತ್ತಿವೆ. ರೈಲು ಸಂಖ್ಯೆ 06261 ವಿಶೇಷ ರೈಲು ಹುಬ್ಬಳ್ಳಿ ಬಿಟ್ಟ ನಂತರ ನೇರವಾಗಿ ವಿಜಯಪುರಕ್ಕೆ ಸಂಚರಿಸುತ್ತಿದ್ದು, ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ಇಲ್ಲದೇ ಬೈಪಾಸ್ ಮೂಲಕ ಸಂಚರಿಸುತ್ತಿರುವುದು ಜಿಲ್ಲೆಯ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ರೈಲು ವಾಪಸ್ 06262 ಸಂಖ್ಯೆಯಲ್ಲಿ ವಿಜಯಪುರದಿಂದ ಹೊರಟು ನೇರವಾಗಿ ಹುಬ್ಬಳ್ಳಿ ತಲುಪಿ ಮುಂದೆ ಮೈಸೂರಿಗೆ ಸಂಚರಿಸಲಿದ್ದು, ಈ ರೈಲುಗೂ ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ಕಲ್ಪಿಸಬೇಕೆಂದು ಆಗ್ರಹಿಸಲಾಗಿದೆ.
ಇನ್ನೊಂದೆಡೆ, ರೈಲು ಸಂಖ್ಯೆ 06577 ಯಶವಂತಪುರ–ವಿಜಯಪುರ ವಿಶೇಷ ರೈಲು ಮೇ 16ರಿಂದ ಜೂನ್ 27ರವರೆಗೆ ಪ್ರತಿ ಶನಿವಾರ ಸಂಜೆ 6.15ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 5.15ಕ್ಕೆ ವಿಜಯಪುರ ತಲುಪಲಿದೆ. ಈ ರೈಲು ಸಹ ಗದಗ ಬೈಪಾಸ್ ಮೂಲಕ ಸಂಚರಿಸುತ್ತಿದ್ದು, ಗದಗ ಹಾಗೂ ಬಾಗಲಕೋಟೆ ಭಾಗದ ಪ್ರಯಾಣಿಕರಿಗೆ ಭಾರೀ ತೊಂದರೆ ಉಂಟಾಗುತ್ತಿದೆ ಎಂದು ವಿಶ್ವನಾಥ ಖಾನಾಪೂರ ತಿಳಿಸಿದ್ದಾರೆ.
ವಾಪಸ್ ಸಂಚರಿಸುವ ರೈಲು ಸಂಖ್ಯೆ 06578 ಪ್ರತಿ ಭಾನುವಾರ ಸಂಜೆ 5 ಗಂಟೆಗೆ ವಿಜಯಪುರದಿಂದ ಹೊರಟು ಮರುದಿನ ಬೆಳಗ್ಗೆ 4 ಗಂಟೆಗೆ ಯಶವಂತಪುರ ತಲುಪಲಿದ್ದು, ಈ ರೈಲು ಸಹ ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ಇಲ್ಲದೇ ಹಾವೇರಿ ಮೂಲಕ ಯಶವಂತಪುರ ತಲುಪಲಿದೆ. ಮತ್ತೆ ಈ ರೈಲು ಹುಬ್ಬಳ್ಳಿ ಬೈಪಾಸ್ ಮೂಲಕ ಬಾದಾಮಿ ಬಿಟ್ಟರೆ ನೇರವಾಗಿ ಹಾವೇರಿ ಮೂಲಕ ಯಶವಂತಪುರ ತಲುಪಲಿದ್ದು, ಗದಗ ಭಾಗದ ಪ್ರಯಾಣಿಕರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, “ಗದಗ ಮೇನ್ ಜಂಕ್ಷನ್ ಮೂಲಕ ವಿಜಯಪುರಕ್ಕೆ ಹೋಗುವ ರೈಲುಗಳು ಗದಗ ಮೇನ್ ಜಂಕ್ಷನ್ ಮೂಲಕವೇ ಸಂಚಾರ ಆಗುತ್ತವೆ” ಎಂದು ಅವರು ತಿಳಿಸಿದ್ದರು ಎಂದು ಖಾನಾಪೂರ ಹೇಳಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ, ನೈರುತ್ಯ ರೈಲ್ವೆ ಇಲಾಖೆ ಹಾಗೂ ವಿಜಯಪುರ ಲೋಕಸಭಾ ಸದಸ್ಯ ರಮೇಶ್ ಜಿಗಜಿಣಗಿ ಅವರಿಗೆ ಬಸವರಾಜ ಬೊಮ್ಮಾಯಿ ಅವರು ಸಹ ಮನವರಿಕೆ ಮಾಡಿದರೂ ಸಹ ಗದಗ ಮೇನ್ ಜಂಕ್ಷನ್‌ಗೆ ನಿಲುಗಡೆ ಇಲ್ಲದೇ ರೈಲುಗಳು ಸಂಚರಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನಾದರೂ ವಿಶೇಷ ರೈಲುಗಳಿಗೆ ಗದಗ ಮೇನ್ ಜಂಕ್ಷನ್‌ನಲ್ಲಿ ನಿಲುಗಡೆ ಕಲ್ಪಿಸಿ, ಗದಗ ಮಾರ್ಗದ ಮೂಲಕವೇ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಗದಗ ಜಿಲ್ಲಾ ವಿಕಾಸ ವೇದಿಕೆ ಪರವಾಗಿ ಜಗದೀಶ ಕಂಗೂರಿ, ಶಿದ್ದಪ್ಪ ಜರತಖನಿ, ವೆಂಕಟೇಶ ಕಬಾಡಿ, ರಜಾಕ್ ನೂರಭಾಷಾ, ಶಿವಮೂರ್ತಯ್ಯ ಪುರಾಣಿಕಮಠ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.
“ಗದಗ ಮೇನ್ ಜಂಕ್ಷನ್ ಉತ್ತರ ಕರ್ನಾಟಕದ ಪ್ರಮುಖ ರೈಲು ನಿಲ್ದಾಣ. ಇಲ್ಲಿಗೆ ನಿಲುಗಡೆ ನೀಡದೇ ವಿಶೇಷ ರೈಲುಗಳನ್ನು ಬೈಪಾಸ್ ಮೂಲಕ ಓಡಿಸುವುದು ಜಿಲ್ಲೆಯ ಜನತೆಗೆ ಮಾಡುತ್ತಿರುವ ಅನ್ಯಾಯ. ಗದಗ ಹಾಗೂ ಬಾಗಲಕೋಟೆ ಭಾಗದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುವಂತೆ ತಕ್ಷಣವೇ ನಿಲುಗಡೆ ಕಲ್ಪಿಸಬೇಕು.”
ವಿಶ್ವನಾಥ ಖಾನಾಪೂರ
ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ



