HomeGadag Newsಲಕ್ಕುಂಡಿಗೆ ‘ಹೆರಿಟೇಜ್ ಹಬ್’ ಕನಸು..! ದೇಶದ ಅಗ್ರ ಪುರಾತತ್ವ ಕೇಂದ್ರವನ್ನಾಗಿಸಲು ಸಚಿವ ಎಚ್.ಕೆ. ಪಾಟೀಲ ಮಾಸ್ಟರ್...

ಲಕ್ಕುಂಡಿಗೆ ‘ಹೆರಿಟೇಜ್ ಹಬ್’ ಕನಸು..! ದೇಶದ ಅಗ್ರ ಪುರಾತತ್ವ ಕೇಂದ್ರವನ್ನಾಗಿಸಲು ಸಚಿವ ಎಚ್.ಕೆ. ಪಾಟೀಲ ಮಾಸ್ಟರ್ ಪ್ಲಾನ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು/ಗದಗ: “ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪುರಾತತ್ವ ವೈಭವವನ್ನು ಒಳಗೊಂಡಿರುವ ಲಕ್ಕುಂಡಿಯನ್ನು ದೇಶದ ಅಗ್ರ ಪುರಾತತ್ವ ಕೇಂದ್ರವನ್ನಾಗಿ ರೂಪಿಸುವ ದಿಸೆಯಲ್ಲಿ ಸಮಗ್ರ ಯೋಜನೆಗಳೊಂದಿಗೆ ಕಾರ್ಯನಿರ್ವಹಿಸಬೇಕು” ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಮಟ್ಟದ ಸಲಹಾ ಸಮಿತಿ ಸಭೆಯು ಶನಿವಾರ ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಸಚಿವ ಎಚ್.ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ಲಕ್ಕುಂಡಿಯ ಪುರಾತತ್ವ ಸಂಪತ್ತಿನ ಸಂರಕ್ಷಣೆ, ದೇವಾಲಯಗಳ ಪುನರುಜ್ಜೀವನ, ಪುರಾತನ ಬಾವಿಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯಗಳನ್ನು ಸಮನ್ವಯದಿಂದ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಈಗಾಗಲೇ 15 ಬಾವಿ ಹಾಗೂ 15 ದೇವಾಲಯಗಳನ್ನು ಸಾರ್ವಜನಿಕರಿಗೆ ಪರಿಚಯಿಸಲಾಗಿದ್ದು, ಕಾಲಕ್ರಮೇಣ ನಿರ್ಲಕ್ಷ್ಯಕ್ಕೆ ಒಳಗಾಗಿ ತಮ್ಮ ಗುರುತನ್ನು ಕಳೆದುಕೊಂಡಿದ್ದ ಅನೇಕ ಪಾರಂಪರಿಕ ತಾಣಗಳನ್ನು ಸರ್ಕಾರ ಮತ್ತು ಸ್ಥಳೀಯರ ಸಹಕಾರದಿಂದ ಮರು ಅನಾವರಣಗೊಳಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.

2026ರೊಳಗೆ ಕನಿಷ್ಠ 50 ಬಾವಿ ಹಾಗೂ 50 ದೇವಾಲಯಗಳನ್ನು ಗುರುತಿಸಿ, ಲಕ್ಕುಂಡಿಯ ಪಾರಂಪರಿಕ ತಾಣಗಳ ಸಂಖ್ಯೆಯನ್ನು 100ರ ಗಡಿಗೆ ತಲುಪಿಸುವ ಮಹತ್ವಾಕಾಂಕ್ಷಿ ಗುರಿ ಹೊಂದಲಾಗಿದೆ. ಈ ಯೋಜನೆ ಸಾಕಾರಗೊಳ್ಳಲು ಸ್ಥಳೀಯರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಸಚಿವರು ಹೇಳಿದರು.

ಇತಿಹಾಸದಲ್ಲಿ ಲಕ್ಕುಂಡಿಯಲ್ಲಿ ಅನೇಕ ಬಾವಿ ಹಾಗೂ ದೇವಾಲಯಗಳಿರುವ ಬಗ್ಗೆ ಉಲ್ಲೇಖಗಳಿದ್ದು, ಅವುಗಳನ್ನು ಹೆಕ್ಕಿ ಹೊರತೆಗೆದು ಸಂರಕ್ಷಿಸುವ ಕಾರ್ಯವನ್ನು ಪ್ರಾಧಿಕಾರ ಕೈಗೊಳ್ಳಬೇಕು. ಈ ದಿಶೆಯಲ್ಲಿ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಸದಸ್ಯರು ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, “ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊತ್ತಿರುವ ಲಕ್ಕುಂಡಿಯ ಪುರಾತತ್ವ ಸಂಪತ್ತು ಇಂದಿನ ಪೀಳಿಗೆಗೆ ಅಚ್ಚರಿಯ ಸಂಗತಿಯಾಗಿದೆ. ಆ ಕಾಲದ ಶಿಲ್ಪಿಗಳ ಪ್ರತಿಭೆ, ಕಲಾತ್ಮಕತೆ ಮತ್ತು ತಾಂತ್ರಿಕ ಸಾಮರ್ಥ್ಯಕ್ಕೆ ಇಲ್ಲಿ ದೊರೆಯುತ್ತಿರುವ ಶಿಲ್ಪಗಳು ಹಾಗೂ ಪುರಾವೆಗಳು ಜೀವಂತ ಸಾಕ್ಷಿಗಳಾಗಿವೆ” ಎಂದು ಹೇಳಿದರು.

ಸಚಿವ ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ನಡೆಯುತ್ತಿರುವ ಅನ್ವೇಷಣಾ ಕಾರ್ಯಗಳಿಂದ ಲಕ್ಕುಂಡಿಯ ಐತಿಹಾಸಿಕ ಮಹತ್ವ ಮತ್ತಷ್ಟು ಬೆಳಕಿಗೆ ಬರುತ್ತಿದೆ. ಈಗ ಪತ್ತೆಯಾಗಿರುವ ಪುರಾವೆಗಳು ಕೇವಲ ಆರಂಭ ಮಾತ್ರ. ಇನ್ನಷ್ಟು ಅನ್ವೇಷಣೆಗಳು ನಡೆದರೆ ಲಕ್ಕುಂಡಿಯ ಗತ ವೈಭವ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ರಾಜ್ಯ ಮಟ್ಟದ ಸಲಹಾ ಸಮಿತಿ ಸದಸ್ಯರು ಲಕ್ಕುಂಡಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸಲಹೆಗಳು ಹಾಗೂ ಅಭಿಪ್ರಾಯಗಳನ್ನು ಮಂಡಿಸಿದರು. ಪಾರಂಪರಿಕ ತಾಣಗಳ ಸಂರಕ್ಷಣೆ, ಪ್ರವಾಸೋದ್ಯಮ ವಿಸ್ತರಣೆ, ಸ್ಥಳೀಯ ಕಲಾ ಪರಂಪರೆಯ ಉತ್ತೇಜನ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಸದಸ್ಯರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ರಾಜ್ಯ ಮಟ್ಟದ ಸಲಹಾ ಸಮಿತಿ ಸದಸ್ಯರಾದ ಸಿ.ಜಿ. ಬೆಟಸೂರಮಠ, ಸಿದ್ದಲಿಂಗೇಶ್ವರ ಎಚ್. ಪಾಟೀಲ, ಶ್ರೀಮತಿ ಗೀತಾಂಜಲಿ ರಾವ್, ಅ.ದ. ಕಟ್ಟಿಮನಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕ್ ಚಂದ್ರ, ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜ್ ಎ., ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೊಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಲಕ್ಕುಂಡಿಯನ್ನು ದೇಶದ ಅಗ್ರ ಪುರಾತತ್ವ ಕೇಂದ್ರವನ್ನಾಗಿ ರೂಪಿಸುವ ಗುರಿಯೊಂದಿಗೆ ಸರ್ಕಾರ ಸಮಗ್ರ ಯೋಜನೆ ರೂಪಿಸಿದೆ. ಇತಿಹಾಸದಲ್ಲಿ ಉಲ್ಲೇಖವಾಗಿರುವ ಬಾವಿ ಹಾಗೂ ದೇವಾಲಯಗಳನ್ನು ಪತ್ತೆಹಚ್ಚಿ ಸಂರಕ್ಷಿಸುವ ಕಾರ್ಯಕ್ಕೆ ವೇಗ ನೀಡಲಾಗುತ್ತದೆ.”

ಎಚ್.ಕೆ. ಪಾಟೀಲ

ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!