ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ವೇತನ ಹೆಚ್ಚಳ ಹಾಗೂ ಹಿಂಬಾಕಿ ಪಾವತಿ ವಿಚಾರವಾಗಿ ಸರ್ಕಾರ ಮತ್ತು ನೌಕರರ ನಡುವಿನ ಚರ್ಚೆ ಮುಂದುವರಿದಿರುವ ನಡುವೆಯೇ ಬಿಎಂಟಿಸಿ ನೌಕರರಿಗೆ ಸಿಹಿಸುದ್ದಿ ಲಭಿಸಿದೆ.
ಬಿಎಂಟಿಸಿ ನೌಕರರ ಖಾತೆಗೆ 11 ತಿಂಗಳ ಹಿಂಬಾಕಿ ವೇತನವನ್ನು ಸರ್ಕಾರ ಜಮೆ ಮಾಡಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ. ಇದರಿಂದ ನೌಕರರಿಗೆ ಭಾಗಶಃ ಆರ್ಥಿಕ ಪರಿಹಾರ ಸಿಕ್ಕಂತಾಗಿದೆ.
ರಾಜ್ಯ ಸರ್ಕಾರ ಇತ್ತೀಚೆಗೆ 4 ಸಾರಿಗೆ ನಿಗಮಗಳ ನೌಕರರಿಗೆ 26 ತಿಂಗಳ ಹಿಂಬಾಕಿ ಪಾವತಿಗೆ ಒಪ್ಪಿಗೆ ನೀಡಿದ್ದು, ಮೊದಲ ಹಂತದಲ್ಲಿ ಸುಮಾರು 450 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ಇಂದು ಬಿಎಂಟಿಸಿ ನೌಕರರಿಗೆ ಹಿಂಬಾಕಿ ಹಣ ಜಮೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಉಳಿದ ಮೂರು ಸಾರಿಗೆ ನಿಗಮಗಳ ನೌಕರರಿಗೂ ಹಂತ ಹಂತವಾಗಿ ಹಿಂಬಾಕಿ ಪಾವತಿ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ 15 ತಿಂಗಳ ಹಿಂಬಾಕಿ ಪಾವತಿ ಬಾಕಿಯಿದೆ ಎಂದು ಮೂಲಗಳು ಹೇಳಿವೆ.
ಈ ನಡುವೆ ಮೇ 20 ರಿಂದ ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ ನೀಡಿರುವ ಸಾರಿಗೆ ನೌಕರರ ಹೋರಾಟ ಮತ್ತಷ್ಟು ತೀವ್ರಗೊಂಡಿದೆ.



