ಶಿವಮೊಗ್ಗ: ಹಾವೇರಿ, ರಾಣೇಬೆನ್ನೂರು, ಬ್ಯಾಡಗಿ ಹಾಗೂ ಹಿರೇಕೆರೂರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.
ಬಹುಗ್ರಾಮ ನದಿ ನೀರು ಯೋಜನೆಯಡಿ ತುಂಗಭದ್ರಾ ನದಿಯ ನೀರನ್ನು ಅವಲಂಬಿಸಿರುವ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಮೇ 18ರಿಂದ 23ರವರೆಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರನ್ನು ಭದ್ರಾವತಿ ಸಮೀಪದ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಹರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನದಿ ತೀರದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಸೂಚನೆ ನೀಡಲಾಗಿದೆ. ನದಿಯ ಕೆಳಭಾಗದಲ್ಲಿ ಸಾರ್ವಜನಿಕರು ಅನಗತ್ಯವಾಗಿ ತಿರುಗಾಡುವುದು, ದನಕರುಗಳನ್ನು ಮೇಯಿಸುವುದು ಹಾಗೂ ತೋಟಗಾರಿಕೆ ಚಟುವಟಿಕೆ ನಡೆಸುವುದನ್ನು ತಪ್ಪಿಸಬೇಕು ಎಂದು ಎಚ್ಚರಿಸಲಾಗಿದೆ.
ಇದೇ ವೇಳೆ ರೈತರು ನದಿ ದಂಡೆಯಲ್ಲಿ ಅಳವಡಿಸಿರುವ ಪಂಪ್‌ಸೆಟ್‌ಗಳ ಮೂಲಕ ನೀರನ್ನು ಎತ್ತುವುದನ್ನೂ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.



