ಬೆಂಗಳೂರು: ಪ್ರೇಮ್ ನಿರ್ದೇಶನ ಮತ್ತು ಧ್ರುವ ಸರ್ಜಾ ಅಭಿನಯದ ‘ಕೆಡಿ: ದಿ ಡೆವಿಲ್’ ಸಿನಿಮಾ ವಿವಾದಗಳ ನಡುವೆಯೇ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಮೂರು ವಾರಗಳ ಪ್ರದರ್ಶನದಲ್ಲಿ ಸಿನಿಮಾ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿದೆ.
ಬೆಂಗಳೂರು ಅಂಡರ್ವರ್ಡ್ ಹಿನ್ನೆಲೆಯ ಈ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ರೀಷ್ಮಾ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಇದುವರೆಗೆ 10,795 ಶೋಗಳು ಸಿಕ್ಕಿದ್ದು, ಆರಂಭಿಕ ದಿನಗಳಲ್ಲೇ ಉತ್ತಮ ಓಪನಿಂಗ್ ಪಡೆದಿತ್ತು. ಮೂರನೇ ಭಾನುವಾರವೂ ಸಿನಿಮಾ 39 ಲಕ್ಷ ರೂಪಾಯಿ ಗಳಿಕೆ ಮಾಡಿದ್ದು, ಕಲೆಕ್ಷನ್ ಸ್ಥಿರವಾಗಿಯೇ ಇದೆ. ಉಪಗ್ರಹ ಹಾಗೂ ಒಟಿಟಿ ಹಕ್ಕುಗಳ ಮಾರಾಟದಿಂದ ಸಿನಿಮಾ ಲಾಭದ ಹಾದಿಯಲ್ಲಿದೆ ಎನ್ನಲಾಗುತ್ತಿದೆ.
ಆದರೆ ಸಿನಿಮಾ ಬಿಡುಗಡೆಗೂ ಮುನ್ನ ಹಲವು ವಿವಾದಗಳು ಸದ್ದು ಮಾಡಿದ್ದವು. ‘ಸೆರಗ ಸರ್ಸೆ’ ಹಾಡಿನ ಸಾಹಿತ್ಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ನೋರಾ ಫತೇಹಿ ಕಾಣಿಸಿಕೊಂಡಿದ್ದ ಈ ಹಾಡು ಅಶ್ಲೀಲವಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಲಾಗಿತ್ತು. ಬಳಿಕ ಚಿತ್ರತಂಡ ಹಾಡನ್ನು ಯೂಟ್ಯೂಬ್ ಮತ್ತು ಸಿನಿಮಾದಿಂದ ತೆಗೆದುಹಾಕಿತ್ತು.
ಟ್ರೇಲರ್ನಲ್ಲಿದ್ದ ಕೆಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ವಿರೋಧ ವ್ಯಕ್ತಪಡಿಸಿದ್ದರಿಂದ ಮೊದಲ ಟ್ರೇಲರ್ ಡಿಲೀಟ್ ಆಗಿ, ನಂತರ ಪರಿಷ್ಕೃತ ಆವೃತ್ತಿ ಬಿಡುಗಡೆ ಮಾಡಲಾಗಿತ್ತು. ಈ ವಿವಾದಗಳ ಪರಿಣಾಮವಾಗಿ ಸಿನಿಮಾ ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ, ಇತರ ಭಾಷೆಗಳ ಡಬ್ಬಿಂಗ್ ಆವೃತ್ತಿಗಳು ತಡವಾಗಿ ಬಂದವು.
ವಿವಾದಗಳ ನಡುವೆಯೂ ಧ್ರುವ ಸರ್ಜಾ ಅಭಿಮಾನಿಗಳು ಸಿನಿಮಾವನ್ನು ಬೆಂಬಲಿಸಿದ್ದು, ‘ಕೆಡಿ’ಗೆ ಉತ್ತಮ ಮೈಲೇಜ್ ಸಿಕ್ಕಿದೆ.



