ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ ರಾಜನ್ ಅವರ ಸಾವಿನ ಸುದ್ದಿ ಚಿತ್ರರಂಗಕ್ಕೆ ಭಾರೀ ಶಾಕ್ ನೀಡಿದೆ. ಅಡ್ಯಾರ್ ಸೇತುವೆಯಿಂದ ನದಿಗೆ ಹಾರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
85 ವರ್ಷದ ಕೆ ರಾಜನ್ ಇಂದು ಬೆಳಿಗ್ಗೆ ಅಡ್ಯಾರ್ ನದಿಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದ್ದು, ಆತ್ಮಹತ್ಯೆ ಕೋಣದಲ್ಲೂ ತನಿಖೆ ನಡೆಯುತ್ತಿದೆ.
1980ರ ದಶಕದಿಂದ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಕೆ ರಾಜನ್, ‘ಬ್ರಹ್ಮಚಾರಿಗಳ್’ ಚಿತ್ರದ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಬಳಿಕ ‘ಗಣೇಶ್ ಸಿನೆ ಆರ್ಟ್ಸ್’ ಬ್ಯಾನರ್ ಅಡಿಯಲ್ಲಿ ಹಲವು ಸಿನಿಮಾಗಳನ್ನು ನಿರ್ಮಿಸಿ, ಕೆಲವು ಚಿತ್ರಗಳನ್ನು ನಿರ್ದೇಶನವೂ ಮಾಡಿದ್ದರು.
ತಮಿಳು ಚಿತ್ರರಂಗದ ಸಮಸ್ಯೆಗಳ ಬಗ್ಗೆ ನಿರ್ಭೀತಿಯಾಗಿ ಮಾತನಾಡುತ್ತಿದ್ದ ವ್ಯಕ್ತಿಯಾಗಿ ಅವರು ಹೆಚ್ಚು ಪ್ರಸಿದ್ಧರಾಗಿದ್ದರು. ನಿರ್ಮಾಪಕರ ಆರ್ಥಿಕ ಸಂಕಷ್ಟ, ನಟರ ಹೆಚ್ಚುತ್ತಿರುವ ಸಂಭಾವನೆ ಮತ್ತು ಚಿತ್ರರಂಗದ ಒಳರಾಜಕೀಯದ ವಿರುದ್ಧ ಅವರು ಆಗಾಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಕೆ ರಾಜನ್ ಅವರ ಭಾಷಣಗಳು ಮತ್ತು ಸಂದರ್ಶನಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಅವರ ನೇರ ನುಡಿಗಳು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿತ್ತು. 2000ರಲ್ಲಿ ಚೆನ್ನೈ ಚಲನಚಿತ್ರ ವಿತರಕರ ಸಂಘದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.
ಹಿರಿಯ ನಿರ್ಮಾಪಕರ ದುರಂತ ಸಾವಿಗೆ ತಮಿಳು ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದು, ಚಿತ್ರರಂಗ ಮತ್ತೊಬ್ಬ ನೇರ ವ್ಯಕ್ತಿತ್ವವನ್ನು ಕಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ.



