HomeGadag Newsಮಳೆಯ ಅಬ್ಬರಕ್ಕೆ ಕುರಿಗಾಹಿ ಬಲಿ..! ಗದಗ ಜಿಲ್ಲೆ ತತ್ತರ

ಮಳೆಯ ಅಬ್ಬರಕ್ಕೆ ಕುರಿಗಾಹಿ ಬಲಿ..! ಗದಗ ಜಿಲ್ಲೆ ತತ್ತರ

For Dai;y Updates Join Our whatsapp Group

Spread the love

ಗದಗ: ಭಾನುವಾರ ಸಂಜೆ ಸುರಿದ ಭಾರಿ ಗಾಳಿ, ಗುಡುಗು-ಸಿಡಿಲು ಸಹಿತ ಮಳೆಯ ಅಬ್ಬರಕ್ಕೆ ಗದಗ ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗಿದೆ. ಜಿಲ್ಲೆಯ ಹಲವೆಡೆ ಮನೆಗಳ ಮೇಲ್ಚಾವಣಿಗಳು ಹಾರಿ ಹೋಗಿದ್ದು, ಬೃಹತ್ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ಜನರು ದೇವಸ್ಥಾನ ಹಾಗೂ ಸಮುದಾಯ ಭವನಗಳಲ್ಲಿ ಆಶ್ರಯ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್ ಕಂಬ ಬಿದ್ದು ಕುರಿಗಾಹಿ ಬಲಿ

ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಿಂದ ಶಿಗ್ಲಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ರಾಹುಲ್ ಚವ್ಹಾಣ್ ಅವರಿಗೆ ಸೇರಿದ ಲೇಔಟ್ ಬಳಿ ಭಾನುವಾರ ಸಂಜೆ ಭಾರೀ ಗಾಳಿ-ಮಳೆಯ ನಡುವೆ ಹೆಸ್ಕಾಂ ವಿದ್ಯುತ್ ಕಂಬ ಏಕಾಏಕಿ ಮುರಿದು ಬಿದ್ದಿದೆ. ಈ ವೇಳೆ ಅಲ್ಲೇ ಕುರಿ ಮೇಯಿಸುತ್ತಿದ್ದ ಮಂಜಪ್ಪ ತಂದೆ ನಿಂಗಪ್ಪ ಸರಸೂರಿ ಎಂಬಾತನ ಎರಡೂ ಕಾಲುಗಳ ಮೇಲೆ ಕಂಬ ಬಿದ್ದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದ.

ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಆತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಗಾಳಿಗೆ ಹಾರಿ ಹೋದ ಶೆಡ್ – ವೃದ್ದ ದಂಪತಿ ಕಂಗಾಲು

ಗದಗ ನಗರದ ಮುಂಡರಗಿ ರಸ್ತೆಯ ಲೇಔಟ್ ಪ್ರದೇಶದಲ್ಲಿ ಶೆಡ್‌ನಲ್ಲಿ ವಾಸವಾಗಿದ್ದ ಕಳಕಪ್ಪ ಹಾಗೂ ಫಕ್ಕೀರಮ್ಮ ಎಂಬ ವೃದ್ದ ದಂಪತಿಯ ಬದುಕು ಒಂದೇ ಮಳೆಗೆ ಅಕ್ಷರಶಃ ಚಿಂದಿಯಾಗಿದ್ದು, ಕಳೆದ ಆರುt ವರ್ಷಗಳಿಂದ ಶೆಡ್‌ನಲ್ಲಿ ವಾಸವಿದ್ದು ಲೇಔಟ್ ಸ್ವಚ್ಛತೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಯ ಶೆಡ್ ಮೇಲ್ಚಾವಣಿ ಭಾರಿ ಗಾಳಿಗೆ ಕೊಚ್ಚಿ ಹೋಗಿದೆ.

ಶೆಡ್ ಒಳಗಿದ್ದ ದವಸ-ಧಾನ್ಯಗಳು ಮಳೆಗೆ ಸಂಪೂರ್ಣ ಹಾಳಾಗಿದ್ದು, ಜೀವನೋಪಾಯವೇ ಕತ್ತಲೆಯಲ್ಲಿದೆ. “ಸರ್ಕಾರ ನಮಗೆ ಪರಿಹಾರ ಕೊಡಲಿ” ಎಂದು ವೃದ್ದ ದಂಪತಿ ಕಣ್ಣೀರಿಟ್ಟಿದ್ದಾರೆ.

ಮನೆ ಕಿತ್ತು ಹೋಗಿ ಗುಡಿಯಲ್ಲಿ ಬದುಕು

ಗದಗ ತಾಲೂಕಿನ ಶಿರುಂಜ್ ಗ್ರಾಮದಲ್ಲಿ ಗಾಳಿ-ಮಳೆಯ ರೌದ್ರಾವತಾರಕ್ಕೆ ಹಲವು ಮನೆಗಳ ಮೇಲ್ಚಾವಣಿಗಳು ಕಿತ್ತು ಹೋಗಿವೆ. ಮನೆಗಳಿಗೆ ಹಾನಿಯಾಗಿರುವ ಕಾರಣ ಗ್ರಾಮಸ್ಥರು ದೇವಸ್ಥಾನ ಹಾಗೂ ಸಮುದಾಯ ಭವನಗಳಲ್ಲಿ ಆಶ್ರಯ ಪಡೆದು ದಿನ ಕಳೆಯುವಂತಾಗಿದೆ.

ತಾಯಿ-ಮಗನ ಜೀವ ಉಳಿಸಿದ ಕೆಲವೇ ಕ್ಷಣಗಳು

ಗದಗ ತಾಲೂಕಿನ ಹೊಸೂರ ಗ್ರಾಮದಲ್ಲೂ ಗಾಳಿ-ಮಳೆಯ ಅಬ್ಬರ ಭಾರೀ ಅವಾಂತರ ಸೃಷ್ಟಿಸಿದೆ. ಮನೆಗಳು ಹಾಗೂ ಶಾಲೆಗಳ ಶೀಟುಗಳು ಗಾಳಿಗೆ ಹಾರಿ ಹೋಗಿವೆ.

ಭಾರಿ ಶಬ್ದ ಕೇಳುತ್ತಿದ್ದಂತೆ ಮನೆಯೊಳಗಿಂದ ಹೊರಗೆ ಓಡಿ ಬಂದ ತಾಯಿ ಮತ್ತು ಮಗ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕೆಲವೇ ಕ್ಷಣ ತಡವಾಗಿದ್ದರೆ ದೊಡ್ಡ ದುರಂತ ಸಂಭವಿಸಬಹುದಿತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಗ್ರಾಮ ರಸ್ತೆಗಳ ಮೇಲೆ ಬೃಹತ್ ಮರಗಳು ಧರೆಗುರುಳಿದ ಪರಿಣಾಮ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಮರಗಳ ತೆರವು ಕಾರ್ಯ ವಿಳಂಬವಾಗಿರುವುದಕ್ಕೆ ಗ್ರಾಮ ಪಂಚಾಯತ್ ಆಡಳಿತದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರಿ ಗಾಳಿ-ಮಳೆಯ ದಾಳಿಗೆ ಜಿಲ್ಲೆಯ ಜನರು ಭಯಭೀತರಾಗಿದ್ದು, ಹಲವೆಡೆ ವಿದ್ಯುತ್ ವ್ಯತ್ಯಯ, ಸಂಚಾರ ಅಸ್ತವ್ಯಸ್ತ ಹಾಗೂ ಲಕ್ಷಾಂತರ ರೂಪಾಯಿ ಆಸ್ತಿ ಹಾನಿ ಸಂಭವಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!