ಮಡಿಕೇರಿ: ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಚೆನ್ನೈ ಮೂಲದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಸಾಕಾನೆಗಳ ನಡುವೆ ಏಕಾಏಕಿ ಆರಂಭವಾದ ಕಾದಾಟ ಪ್ರವಾಸಿಗರ ಮುಂದೆ ಭೀಕರ ದುರಂತಕ್ಕೆ ಕಾರಣವಾಗಿದ್ದು, ಜಿನ್ಶು (33) ಎಂಬ ಮಹಿಳೆ ಆನೆಯಡಿ ಸಿಲುಕಿ ಮೃತಪಟ್ಟಿದ್ದಾರೆ.
ನಂಜರಾಯಪಟ್ಟಣದ ದುಬಾರೆ ಶಿಬಿರಕ್ಕೆ ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದ ಜಿನ್ಶು, ಕಾವೇರಿ ತೀರದಲ್ಲಿ ಸಮಯ ಕಳೆಯುತ್ತಿದ್ದ ವೇಳೆ ಮಾವುತರು ಆನೆಗಳನ್ನು ಸ್ನಾನಕ್ಕೆ ಕರೆತಂದಿದ್ದರು. ಇದೇ ಸಂದರ್ಭದಲ್ಲಿ ಎರಡು ಆನೆಗಳ ನಡುವೆ ತೀವ್ರ ಕಾದಾಟ ಶುರುವಾಗಿದೆ. ಒಂದು ಆನೆ ಮತ್ತೊಂದನ್ನು ದಂತದಿಂದ ತಿವಿದ ಪರಿಣಾಮ ಆನೆ ನಿಯಂತ್ರಣ ತಪ್ಪಿ ಮಹಿಳೆಯ ಮೇಲೆಯೇ ಬಿದ್ದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಜಿನ್ಶು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ವೇಳೆ ಪ್ರವಾಸಿಗರಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೆಲವರು ಸ್ಥಳದಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.
ಮಹಿಳೆಯನ್ನು ರಕ್ಷಿಸಲು ಮಾವುತರು ಹಾಗೂ ಸ್ಥಳದಲ್ಲಿದ್ದ ಕೆಲವರು ಶಕ್ತಿಮೀರಿ ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಆನೆಗಳ ನಿಯಂತ್ರಣ ತಪ್ಪಿದ ವರ್ತನೆ ಇದೀಗ ಶಿಬಿರದ ಸುರಕ್ಷತಾ ಕ್ರಮಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ತನಿಖೆ ಮುಂದುವರಿದಿದೆ.



