ಕಲಬುರಗಿ: ದೇಶ ಆರ್ಥಿಕ ಸಂಕಷ್ಟದತ್ತ ಸಾಗುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೊದಲೇ ಎಚ್ಚರಿಸಿದ್ದರು. ಆದರೆ ಆಗ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದೀಗ ಬಿಜೆಪಿಯವರು ಪೆಟ್ರೋಲ್ ಕಡಿಮೆ ಬಳಸಿ ಎಂದು ಹೇಳುತ್ತಿರುವುದು ವಿಪರ್ಯಾಸ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ತೈಲದ ಮಿತಬಳಕೆಗೆ ಕರೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೇಶದ ಇಂದಿನ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದರು.
“ದೇಶವನ್ನು ಈ ಸ್ಥಿತಿಗೆ ತಂದವರು ಯಾರು? ಬಿಜೆಪಿಯವರು ನಾಲ್ಕು ಜನ ಎಸ್ಕಾರ್ಟ್ ವಾಹನಗಳನ್ನು ಕಡಿಮೆ ಮಾಡಿದರೆ ದೇಶದ ಸಮಸ್ಯೆ ಪರಿಹಾರವಾಗುತ್ತದೆಯೇ?” ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಇಷ್ಟು ದಿನ ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಿದ್ದ ಪ್ರಧಾನಿ ಮೋದಿ ಈಗ ಆರ್ಥಿಕ ಪರಿಸ್ಥಿತಿ ಆಪತ್ತಿನಲ್ಲಿದೆ ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಪ್ರಧಾನಿಯವರು ದೇಶ ಜಾಗತಿಕ ಆರ್ಥಿಕ ಸಂಕಷ್ಟದ ಪರಿಣಾಮ ಎದುರಿಸುತ್ತಿದೆ ಎಂಬುದನ್ನು ಮುಂಚೆಯೇ ಸಂಸತ್ತಿನಲ್ಲಿ ಸ್ಪಷ್ಟವಾಗಿ ಹೇಳಬೇಕಿತ್ತು. ಜನರಿಗೆ ನಿಜ ಸ್ಥಿತಿ ತಿಳಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ ಎಂದು ಅವರು ಹೇಳಿದರು.
“ನಾವು ಮೋದಿ ಅವರು ಹೇಳುವುದಕ್ಕೂ ಮುಂಚೆಯೇ ವಾರದಲ್ಲಿ ಒಂದು ದಿನ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದೇವೆ. ಯಾವುದಾದರೂ ಒಳ್ಳೆಯ ಸುದ್ದಿ ಇದ್ದಾಗ ಮಾತ್ರ ರಾತ್ರಿ ಎಂಟು ಗಂಟೆಗೆ ಟಿವಿ ಮುಂದೆ ಬಂದು ಮಾತನಾಡುತ್ತಾರೆ. ಪರಿಸ್ಥಿತಿಯ ಗಂಭೀರತೆಯನ್ನು ಮೊದಲೇ ಜನರ ಮುಂದೆ ಇಡಲಿಲ್ಲವೇ?” ಎಂದು ಪ್ರಶ್ನಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.



