ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ನಿರ್ಮಾಣ ವಿಚಾರ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ದಲಿತ ಸಂಘಟನೆಗಳು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಹಲವು ವರ್ಷಗಳಿಂದ ಅಂಬೇಡ್ಕರ್ ಸರ್ಕಲ್ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದ ಸಂಘಟನೆಗಳು, ಅಂಬೇಡ್ಕರ್ ಜಯಂತಿಗೆ ಎರಡು ವಾರಗಳ ಮುಂಚಿತವಾಗಿ ನಡೆದ ಭೂಮಿ ಪೂಜೆಯನ್ನು “ರಾಜಕೀಯ ಗಿಮಿಕ್” ಎಂದು ಆರೋಪಿಸಿವೆ.
ಪಟ್ಟಣದ ರಾಮನಗರ ಪೊಲೀಸ್ ಠಾಣೆ ಸಮೀಪದಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಸರ್ಕಲ್‌ಗೆ 50 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಹೇಳಿ ಹಾಲಿ ಶಾಸಕ ಕೆ. ನೇಮಿರಾಜ್ ನಾಯ್ಕ್ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, “ನಿಜವಾಗಿಯೂ 50 ಲಕ್ಷ ರೂ. ಅನುದಾನ ಮಂಜೂರಾಗಿದೆಯೇ?, ಯಾವ ಇಲಾಖೆಯಡಿ ಕಾಮಗಾರಿ ನಡೆಯುತ್ತಿದೆ?, ಟೆಂಡರ್ ಪ್ರಕ್ರಿಯೆ ನಡೆದಿದೆಯೇ?, ಟೆಂಡರ್ ಪ್ರತಿಯನ್ನು ಕೇಳಿದಾಗ ಯಾಕೆ ನೀಡಲಾಗುತ್ತಿಲ್ಲ?, ಕಾಮಗಾರಿ ಸ್ಥಳದಲ್ಲಿ ಇಲಾಖೆಯ ನಾಮಫಲಕ ಯಾಕಿಲ್ಲ?” ಎಂದು ದಲಿತ ಸಂಘಟನೆಗಳು ಪ್ರಶ್ನೆಗಳ ಸುರಿಮಳೆಗೈದಿವೆ.
ಇದೇ ವೇಳೆ, “20 ವರ್ಷಗಳ ಕಾಲ ಎಸ್‌ಸಿ ಮೀಸಲು ಕ್ಷೇತ್ರದಿಂದ ರಾಜಕೀಯ ಲಾಭ ಪಡೆದು ಅಧಿಕಾರ ಅನುಭವಿಸಿದವರು, ಅಂಬೇಡ್ಕರ್ ಅವರ ಹೆಸರಿನ ಸರ್ಕಲ್ ನಿರ್ಮಾಣಕ್ಕೆ ಇಷ್ಟು ವರ್ಷ ಯಾಕೆ ಕಾಯಬೇಕಾಯಿತು?” ಎಂದು ಸಾರ್ವಜನಿಕ ವಲಯದಲ್ಲೂ ಚರ್ಚೆ ಜೋರಾಗಿದೆ.
ಪ್ರತಿಭಟನಾಕಾರರು ಮಾತನಾಡಿ, “ಅಂಬೇಡ್ಕರ್ ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು. ಅದು ದಲಿತ ಸಮುದಾಯದ ಆತ್ಮಗೌರವದ ಸಂಕೇತ. ಅಂಬೇಡ್ಕರ್ ಸಂವಿಧಾನದ ಆಶಯಗಳನ್ನು ಮಾತಿನಲ್ಲಿ ಮಾತ್ರ ಹೊಗಳದೇ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಕಾರ್ಯರೂಪಕ್ಕೆ ತರುವುದೇ ಅವರಿಗೆ ಸಲ್ಲುವ ನಿಜವಾದ ಗೌರವ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ತಾಲೂಕು ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಪದಾಧಿಕಾರಿಗಳು ಹಾಗೂ ಡಿಎಸ್‌ಎಸ್ ತಾಲೂಕು ಅಧ್ಯಕ್ಷ ಪರಶುರಾಮ್ ಹೆಗ್ಡಳ್ ಸೇರಿದಂತೆ ಮರಿಯಪ್ಪ ದಸಮಾಪುರ, ರಾಮೇಶ್ ಚಿಂತ್ರಪಳ್ಳಿ, ಬಾಸವರಾಜ್ ಕಾಳಿ, ಪಕ್ಕೀರಪ್ಪ ಕಡ್ಲಬಾಳು, ಕೊಟೆಪ್ಪ ದೂಪದಹಳ್ಳಿ, ನಾಗರಾಜ್ ಕಲ್ಲಹಳ್ಳಿ, ಮೈಲಪ್ಪ ಕೋಗಳಿ, ರಾಮೇಶ್ ಪೂಜಾರ್, ಬಸವರಾಜ್ ಕೆಚ್ಚಿನಬಂಡಿ, ಗೋಣೆಪ್ಪ ಕೆಚ್ಚಿನಬಂಡಿ ಮತ್ತಿತರರು ಉಪಸ್ಥಿತರಿದ್ದರು.



