HomeKarnataka Newsಶೃಂಗೇರಿ ಅಂಚೆ ಮತ ಮರು ಎಣಿಕೆ ವಿವಾದ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ!

ಶೃಂಗೇರಿ ಅಂಚೆ ಮತ ಮರು ಎಣಿಕೆ ವಿವಾದ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ!

For Dai;y Updates Join Our whatsapp Group

ಚಿಕ್ಕಮಗಳೂರು: 2023ರ ವಿಧಾನಸಭಾ ಚುನಾವಣೆಯಿಂದ ಆರಂಭವಾಗಿ, ಮೂರು ವರ್ಷಗಳ ಕಾನೂನು ಹೋರಾಟದ ಬಳಿಕ ಭಾರೀ ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆ ವಿವಾದದ ಕುರಿತು ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

ಈ ಪ್ರಕರಣದಲ್ಲಿ ಕೆಲವೇ ದಿನಗಳ ಅವಧಿಯಲ್ಲಿ ಶಾಸಕರ ಬದಲಾವಣೆಯಾಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರು ಶಾಸಕ ಸ್ಥಾನ ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು ನಡೆಯಲಿರುವ ವಿಚಾರಣೆ ಮಹತ್ವ ಪಡೆದುಕೊಂಡಿದೆ.

201 ಮತಗಳ ಅಂತರದಲ್ಲಿ ರಾಜೇಗೌಡ ಗೆಲುವು:

2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಅಂಚೆ ಮತಗಳ ಮರು ಎಣಿಕೆಗೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ಸುಮಾರು ಮೂರು ವರ್ಷಗಳ ಕಾಲ ನಡೆದ ಬಳಿಕ ಹೈಕೋರ್ಟ್ ಅಂಚೆ ಮತಗಳ ಮರು ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ಆದೇಶಿಸಿತ್ತು.

ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು:

ಹೈಕೋರ್ಟ್ ಆದೇಶದಂತೆ ಮೇ 2ರಂದು ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು 52 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದರಿಂದ ಮೂರು ವರ್ಷಗಳ ಕಾಲ ಶಾಸಕರಾಗಿದ್ದ ರಾಜೇಗೌಡ ಅವರು ಶಾಸಕ ಸ್ಥಾನ ಕಳೆದುಕೊಂಡಿದ್ದರು.

ಮರು ಎಣಿಕೆಯ ಬಳಿಕ ಜೀವರಾಜ್ ಅವರು ಶಾಸಕರಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದರು.

ಮೂರೇ ದಿನಕ್ಕೆ ಮತ್ತೆ ಬದಲಾದ ಶಾಸಕ ಸ್ಥಾನ:

ಆದರೆ ಅಂಚೆ ಮತ ಮರು ಎಣಿಕೆ ಫಲಿತಾಂಶವನ್ನು ಪ್ರಶ್ನಿಸಿ ಟಿ.ಡಿ. ರಾಜೇಗೌಡ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡುವ ಮೂಲಕ ರಾಜೇಗೌಡ ಅವರು ಶಾಸಕ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ನೀಡಿತ್ತು.

ಇದರ ಪರಿಣಾಮವಾಗಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಡಿ.ಎನ್. ಜೀವರಾಜ್ ಅವರು ಮೂರೇ ದಿನಗಳಲ್ಲಿ ಮತ್ತೆ ಶಾಸಕ ಸ್ಥಾನ ಕಳೆದುಕೊಂಡರು.

ಇಂದು ದಾಖಲೆಗಳ ಪರಿಶೀಲನೆ ಸಾಧ್ಯತೆ:

ಮೇ 2ರಂದು ಅಂಚೆ ಮತ ಮರು ಎಣಿಕೆ ನಡೆದ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜು ಆವರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಮರು ಎಣಿಕೆಯ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ತೀವ್ರ ಕುತೂಹಲ ಮನೆ ಮಾಡಿತ್ತು.

ಇದೀಗ ಪ್ರಕರಣ ಮತ್ತೆ ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿದ್ದು, ಇಂದು ನಡೆಯುವ ವಿಚಾರಣೆಯಲ್ಲಿ 2023ರ ಮೂಲ ಮತ ಎಣಿಕೆ ಹಾಗೂ 2026ರ ಮರು ಎಣಿಕೆಯ ದಾಖಲೆಗಳನ್ನು ಚುನಾವಣಾ ಆಯೋಗ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಈ ದಾಖಲೆಗಳನ್ನು ನ್ಯಾಯಾಲಯ ಪರಿಶೀಲಿಸುವ ಸಾಧ್ಯತೆಯಿದೆ.

ಹೀಗಾಗಿ ಶೃಂಗೇರಿ ಕ್ಷೇತ್ರದ ಶಾಸಕ ಸ್ಥಾನ ಯಾರ ಪಾಲಾಗಲಿದೆ ಎಂಬುದು ಮತ್ತೆ ಕುತೂಹಲ ಮೂಡಿಸಿದ್ದು, ಇಂದಿನ ಸುಪ್ರೀಂ ಕೋರ್ಟ್ ವಿಚಾರಣೆಯತ್ತ ರಾಜ್ಯ ರಾಜಕೀಯದ ಚಿತ್ತ ನೆಟ್ಟಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img