ಶಿವಮೊಗ್ಗ: ನಗರದ ಬುದ್ಧನಗರದಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಕಳೆದ ಒಂದು ತಿಂಗಳಿನಿಂದ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 15ರಿಂದ ಕಾಣೆಯಾಗಿರುವ ಕುಟುಂಬಸ್ಥರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ನಾಪತ್ತೆಯಾದವರನ್ನು ಮೊಹಮ್ಮದ್ ಇಕ್ಬಾಲ್ (62), ನಸ್ರತ್ ಬಾನು (54), ಮೊಹಮ್ಮದ್ ಫಾಜಿಲ್ (35) ಹಾಗೂ ಮೊಹಮ್ಮದ್ ಆದಿಲ್ (32) ಎಂದು ಗುರುತಿಸಲಾಗಿದೆ. ಆರಂಭದಲ್ಲಿ ಸಂಬಂಧಿಕರು ಅವರು ಎಲ್ಲೋ ಹೋಗಿರಬಹುದು ಎಂದುಕೊಂಡು ಕಾದು ಕುಳಿತ್ತಿದ್ದರು. ಆದರೆ ತಿಂಗಳು ಕಳೆದರೂ ಯಾವುದೇ ಮಾಹಿತಿ ಸಿಗದ ಹಿನ್ನೆಲೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ.
ಪೊಲೀಸರ ಪ್ರಕಾರ, ಮೊಹಮ್ಮದ್ ಇಕ್ಬಾಲ್ 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು ಹಾಗೂ ಬಿಳಿ ಮೈಬಣ್ಣ ಹೊಂದಿದ್ದಾರೆ. ನಸ್ರತ್ ಬಾನು 5.2 ಅಡಿ ಎತ್ತರ, ದಪ್ಪ ಮೈಕಟ್ಟು, ಗೋಧಿ ಮೈಬಣ್ಣ ಹಾಗೂ ಸೀಳು ತುಟಿಯ ಗುರುತು ಹೊಂದಿದ್ದಾರೆ.
ಇದೇ ಕುಟುಂಬದ ಮೊಹಮ್ಮದ್ ಫಾಜಿಲ್ 5.6 ಅಡಿ ಎತ್ತರ, ತೆಳ್ಳನೆ ಮೈಕಟ್ಟು ಹಾಗೂ ಎದೆಯ ಭಾಗದಲ್ಲಿ ಚರ್ಮಗಂಟು ಹೊಂದಿದ್ದು, ಮೊಹಮ್ಮದ್ ಆದಿಲ್ 5.4 ಅಡಿ ಎತ್ತರ, ದಪ್ಪ ಮೈಕಟ್ಟು ಮತ್ತು ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಂಬಂಧಿಕರು ಹಾಗೂ ಪೊಲೀಸರು ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಕುಟುಂಬದ ಯಾವುದೇ ಸದಸ್ಯರ ಸುಳಿವು ಸಿಕ್ಕಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಠಾಣೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ನಾಪತ್ತೆಯಾದವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ 08182-261414, 9972426144, 9480803345 ಅಥವಾ 6264571710 ಸಂಖ್ಯೆಗೆ ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.



