ಚಿಕ್ಕಮಗಳೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವಕನೊಬ್ಬನಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಒಂದು ದಿನಪೂರ್ತಿ ಆಂಬುಲೆನ್ಸ್ನಲ್ಲೇ ಅಲೆದಾಡಬೇಕಾದ ಮನಕಲಕುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಅರೆನೂರು ಸಮೀಪ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ರವಿ ಎಂಬ ಯುವಕನನ್ನು ಮೊದಲು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರೆಫರ್ ಮಾಡಿದ್ದರು.
ಆದರೆ ಮಂಗಳೂರಿನ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ಸರ್ಜನ್ ಲಭ್ಯವಿಲ್ಲ ಎಂಬ ಕಾರಣ ನೀಡಿ ಚಿಕಿತ್ಸೆ ನಿರಾಕರಿಸಲಾಗಿದೆ ಎನ್ನಲಾಗಿದೆ. ಮತ್ತೊಂದು ಆಸ್ಪತ್ರೆಯಲ್ಲಿ 80 ಸಾವಿರ ರೂ. ಮುಂಗಡ ಹಣ ಕೇಳಲಾಗಿದೆ.
ಬಡ ಕೂಲಿ ಕಾರ್ಮಿಕ ಕುಟುಂಬಕ್ಕೆ ಹಣ ಒದಗಿಸಲು ಸಾಧ್ಯವಾಗದೇ, ಗಾಯಾಳುವನ್ನು ಮತ್ತೆ ಆಲ್ದೂರು ಗ್ರಾಮಕ್ಕೆ ಕರೆತಂದು ರಸ್ತೆ ಬದಿಯಲ್ಲಿ ಆಂಬುಲೆನ್ಸ್ನಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಪೋಷಕರು ಮಗನಿಗಾಗಿ ಅಸಹಾಯಕರಾಗಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಸ್ಥಳೀಯರ ಮನಕಲಕಿದೆ. ಬಳಿಕ ಗ್ರಾಮಸ್ಥರ ಸಲಹೆ ಮೇರೆಗೆ ಯುವಕನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಚಿಕ್ಕಮಗಳೂರಿನಲ್ಲಿ ವೈದ್ಯಕೀಯ ಕಾಲೇಜು ಇದ್ದರೂ ಗಂಭೀರ ರೋಗಿಗಳಿಗೆ ಚಿಕಿತ್ಸೆ ಸಿಗದಿರುವುದು ಆರೋಗ್ಯ ವ್ಯವಸ್ಥೆಯ ವೈಫಲ್ಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



