ಗದಗ: ವಾಕಿಂಗ್ ವೇಳೆ ಪಾದಚಾರಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕೃಷಿ ಇಲಾಖೆಯ ಎಫ್‌ಡಿಎ (ಪ್ರಥಮ ದರ್ಜೆ ಸಹಾಯಕ) ಸುನೀಲ್ ದಾಸರ್ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಬುಧವಾರ ರಾತ್ರಿ ಗದಗ ನಗರದಲ್ಲಿ ನಡೆದಿದೆ.
ನಗರದ ದೋಭಿಘಾಟ್ ಸಮೀಪ ಈ ದುರ್ಘಟನೆ ಸಂಭವಿಸಿದ್ದು, ಸುನೀಲ್ ದಾಸರ್ ಅವರು ವಾಕಿಂಗ್ ಮಾಡುತ್ತಿದ್ದ ವೇಳೆ ಅತಿವೇಗದಲ್ಲಿ ಬಂದ ಬೈಕ್ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಡಿಕ್ಕಿಯ ತೀವ್ರತೆಗೆ ಸುನೀಲ್ ದಾಸರ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಗದಗ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.



