ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಗಾಳಿ ಹಾಗೂ ಗುಡುಗು ಸಹಿತ ಜಡಿಮಳೆಯಿಂದಾಗಿ ನಮ್ಮ ಮೆಟ್ರೋ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಹಸಿರು ಹಾಗೂ ನೇರಳೆ ಸೇರಿದಂತೆ ಎಲ್ಲಾ ಪ್ರಮುಖ ಮೆಟ್ರೋ ಮಾರ್ಗಗಳಲ್ಲಿ ರೈಲು ಸೇವೆಗಳು ವಿಳಂಬವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ತುರ್ತು ಪ್ರಕಟಣೆ ಹೊರಡಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, ಭಾರೀ ಗಾಳಿ ಮತ್ತು ಮಳೆಯ ಪರಿಣಾಮವಾಗಿ ಮೆಟ್ರೋ ಸೇವೆಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ತಿಳಿಸಿದೆ.
ಪ್ರಯಾಣಿಕರ ಸುರಕ್ಷತೆಯೇ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿರುವ BMRCL, ಈ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ. ಸುರಕ್ಷಿತ ಕಾರ್ಯಾಚರಣೆಗೆ ಆದ್ಯತೆ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ವಿಳಂಬವಾಗಿದೆ. ಪರಿಸ್ಥಿತಿ ಸಹಜವಾಗುವವರೆಗೆ ಪ್ರಯಾಣಿಕರು ಸಿಬ್ಬಂದಿಗಳೊಂದಿಗೆ ಸಹಕರಿಸಬೇಕಾಗಿ ಮನವಿ ಮಾಡಲಾಗಿದೆ.



