ಬೆಂಗಳೂರು: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಬಾಕಿ ಹಣ ಬಿಡುಗಡೆಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಬೆಂಗಳೂರಿನ ಕಮಲಾನಗರದ ನಿವಾಸಿ ಆರ್. ಗಂಗಾ ಹಾಗೂ ನಂದಿನಿ ಲೇಔಟ್‌ನ ಜಿ.ಡಿ. ಪವಿತ್ರಾ ಅವರು ಸಲ್ಲಿಸಿದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ನ್ಯಾಯಮೂರ್ತಿಗಳಾದ ಡಾ. ಕೆ. ಮನ್ಮಥ ರಾವ್ ಮತ್ತು ಸೂರಜ್ ಗೋವಿಂದರಾಜ್ ಅವರಿದ್ದ ಪೀಠವು ರಾಜ್ಯ ಹಣಕಾಸು ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಸರ್ಕಾರದ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದ್ದಾರೆ.
ವರದಿಗಳ ಪ್ರಕಾರ, 2024ರ ಏಪ್ರಿಲ್‌ನಿಂದ 2025ರ ಜನವರಿವರೆಗೆ ನಿರಂತರವಾಗಿ ಹಣ ವಿತರಣೆ ನಡೆದಿದ್ದ ಗೃಹಲಕ್ಷ್ಮಿ ಯೋಜನೆ, ನಂತರದ ತಿಂಗಳಲ್ಲಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಬದಲಾವಣೆಗಳಿಂದ ವ್ಯತ್ಯಯಗೊಂಡಿದೆ. ಇದರ ಪರಿಣಾಮವಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳು ಫಲಾನುಭವಿಗಳಿಗೆ ಜಮೆಯಾಗದೆ ಬಾಕಿ ಉಳಿದಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.



