HomeGadag News80ರ ಹರೆಯದಲ್ಲೂ ಕೈಬಿಡದ ದುಡಿಮೆ!

80ರ ಹರೆಯದಲ್ಲೂ ಕೈಬಿಡದ ದುಡಿಮೆ!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ವಯಸ್ಸು 80 ದಾಟಿದರೂ ದುಡಿದು ತಿನ್ನಬೇಕು ಎನ್ನುವ ಛಲ ಮಾತ್ರ ಕುಂದಿಲ್ಲ. ದೇಹದಲ್ಲಿ ಶಕ್ತಿ ಇರುವವರೆಗೆ ಕೆಲಸ ಮಾಡಲೇಬೇಕು ಎನ್ನುವ ಹಠದಿಂದ ವೀರಾಪುರ ಗ್ರಾಮದ ಹನಮವ್ವ ಹನಮಪ್ಪ ಮೊಹಿತೆ ಕಳೆದ 20 ವರ್ಷಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದಾರೆ.
ಗಜೇಂದ್ರಗಡ ತಾಲೂಕಿನ ರಾಂಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಾಪುರ ಗ್ರಾಮದ ನಿವಾಸಿಯಾದ ಹನಮವ್ವ ಅವರಿಗೆ ಪತಿ ಇಲ್ಲ. ಇಬ್ಬರು ಗಂಡು ಮಕ್ಕಳು ಇದ್ದರೂ ಕುಟುಂಬದ ಸಂಕಷ್ಟ ಮಾತ್ರ ಕಡಿಮೆಯಾಗಿಲ್ಲ. ಒಬ್ಬ ಮಗ ಬೇರೆ ಮನೆ ಮಾಡಿಕೊಂಡಿದ್ದರೆ, ಮತ್ತೊಬ್ಬ ಮಗ ಎಂಟು ವರ್ಷಗಳ ಹಿಂದೆ ಕೆಲಸಕ್ಕೆ ಹೋದವನು ಮರಳಿ ಮನೆಗೆ ಬಂದಿಲ್ಲ. ಇದೀಗ ಸೊಸೆಯೊಂದಿಗೆ ಜೀವನ ಸಾಗಿಸುತ್ತಿರುವ ಹನಮವ್ವ, ತಮ್ಮ ಎರಡು ಎಕರೆ ಒಣಭೂಮಿಯಿಂದ ಜೀವನ ಸಾಗುವುದು ಕಷ್ಟವೆಂದು ಅರಿತು ನರೇಗಾ ಯೋಜನೆಯ ಮೊರೆ ಹೋಗಿದ್ದಾರೆ.
ಬೇಸಿಗೆ ಸಮಯದಲ್ಲಿ ಗ್ರಾಮದಲ್ಲಿ ಕೆಲಸ ಸಿಗದ ಸಂದರ್ಭಗಳಲ್ಲಿ ನರೇಗಾ ಯೋಜನೆಯೇ ಇವರ ಕುಟುಂಬಕ್ಕೆ
ಆಧಾರವಾಗಿದೆ. ಸೊಸೆಯೊಂದಿಗೆ ಕಾಮಗಾರಿಗೆ ತೆರಳಿ ಇಂದಿಗೂ ಉತ್ಸಾಹದಿಂದ ದುಡಿಯುತ್ತಿರುವ ಹನಮವ್ವ ಗ್ರಾಮದಲ್ಲೇ ಇತರರಿಗೆ ಮಾದರಿಯಾಗಿದ್ದಾರೆ.
ಇನ್ನೊಬ್ಬ ಹಿರಿಯ ಮಹಿಳೆ ಹನಮವ್ವ ಯಲ್ಲಪ್ಪ ಮೊಹಿತೆ ಅವರಿಗೂ 78 ವರ್ಷ ವಯಸ್ಸು. ಆದರೂ ಉದ್ಯೋಗ ಖಾತ್ರಿ ಕೆಲಸ ಆರಂಭವಾದರೆ ಸಾಕು, ನಮೂನೆ-6ರಲ್ಲಿ ಹೆಸರು ನೋಂದಾಯಿಸಿಕೊಂಡು ಕೆಲಸಕ್ಕೆ ಬರುತ್ತಾರೆ.

“ಮನೆಯಲ್ಲಿ ಖಾಲಿ ಕುಳಿತುಕೊಳ್ಳುವುದಕ್ಕಿಂತ ಮಕ್ಕಳಿಗೆ ಸಹಾಯ ಮಾಡಬೇಕು” ಎನ್ನುವ ಮನೋಭಾವದಿಂದ ಅವರು ಮಕ್ಕಳ ಹಾಗೂ ಸೊಸೆಯಂದಿರೊಂದಿಗೆ ನರೇಗಾ ಕಾಮಗಾರಿಯಲ್ಲಿ ದುಡಿಯುತ್ತಿದ್ದಾರೆ.

ಗ್ರಾಮೀಣ ಭಾಗದ ವಯೋವೃದ್ಧರು ಮತ್ತು ವಿಶೇಷಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುತ್ತಿರುವುದರಿಂದ ಸಾಕಷ್ಟು ಬಡ ಕೂಲಿಕಾರರಿಗೆ ಯೋಜನೆ ನೆರವಾಗುತ್ತಿದೆ.

“ಬೇಸಿಗೆಯಲ್ಲಿ ಹಳ್ಳಿಯಲ್ಲಿ ಕೆಲಸ ಇರಲ್ಲರೀ… ಉದ್ಯೋಗ ಖಾತ್ರಿ ಕೆಲಸ ಶುರುವಾದರೆ ನಾವು ಕೂಡ ಕೆಲಸಕ್ಕೆ ಬರುತ್ತೀವಿ. ದೇಹದಲ್ಲಿ ಇನ್ನೂ ದುಡಿಯುವ ಶಕ್ತಿ ಇದೆ. ಮನೆಯಲ್ಲಿ ಖಾಲಿ ಕುಳಿತುಕೊಳ್ಳುವುದಕ್ಕಿಂತ ನಾಲ್ಕು ರೂಪಾಯಿ ದುಡಿದರೆ ಬದುಕಿಗೆ ಸಹಾಯವಾಗುತ್ತದೆ.”

 ಹನಮವ್ವ ಮೊಹಿತೆ, ಕೂಲಿಕಾರರು, ವೀರಾಪುರ

“ನರೇಗಾ ಜಾಬ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೆಲಸ ಮಾಡಬಹುದು. ಇದರಲ್ಲಿ ಯಾವುದೇ ವಯಸ್ಸಿನ ಮಿತಿ ಇಲ್ಲ. ವಯೋವೃದ್ಧರು ಹಾಗೂ ವಿಕಲಚೇತನರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗುತ್ತಿದೆ.”

ವಿಶ್ವನಾಥ ರಾಠೋಡ,

ಸಹಾಯಕ ನಿರ್ದೇಶಕರು (ಗ್ರಾ.ಉ), ತಾ.ಪಂ. ಗಜೇಂದ್ರಗಡ

“ಬೇಸಿಗೆಯಲ್ಲಿ ಗ್ರಾಮೀಣ ಭಾಗದ ಜನರು ಗುಳೆ ಹೋಗುವುದನ್ನು ತಪ್ಪಿಸಲು ಊರಲ್ಲೇ ಕೆಲಸ ನೀಡಲಾಗುತ್ತಿದೆ. ನರೇಗಾ ಯೋಜನೆ ಗ್ರಾಮೀಣ ಕುಟುಂಬಗಳಿಗೆ ಆರ್ಥಿಕ ಬಲ ನೀಡುತ್ತಿದೆ.”

ಚಂದ್ರಶೇಖರ ಬಿ. ಕಂದಕೂರ, ಇಒ, ತಾ.ಪಂ. ಗಜೇಂದ್ರಗಡ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!