ವಿಜಯಪುರ: ಲಾಡ್ಲೆ ಮಶಾಕ್ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದು, ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
“ಮುಸ್ಲಿಮರ ಓಲೈಕೆ ಅತಿಯಾದ ಮಟ್ಟಕ್ಕೆ ಹೋಗಿದೆ. ಗಲಭೆ, ಕಲ್ಲು ತೂರಾಟ ಮತ್ತು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಮೇಲಿನ ಪ್ರಕರಣಗಳನ್ನು ಸರ್ಕಾರ ಹಿಂಪಡೆಯುತ್ತಿರುವುದು ಅಪರಾಧಿಗಳಿಗೆ ಉತ್ತೇಜನ ನೀಡಿದಂತಾಗಿದೆ” ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.
ವಿಜಯೇಂದ್ರ ವಿರುದ್ಧ ನೇರವಾಗಿ ಆರೋಪ ಮಾಡಿದ ಅವರು, “ವಿಜಯೇಂದ್ರ ಅನೇಕ ವಂಚನೆ ಮತ್ತು ನಕಲಿ ಸಹಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ ಇಂತಹ ವಿಚಾರಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವನಿಗಿಲ್ಲ” ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪಕ್ಷದ ಒಳರಾಜಕೀಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಯತ್ನಾಳ್, “ರಾಜ್ಯ ಪದಾಧಿಕಾರಿಗಳಲ್ಲಿ ಬಹುತೇಕರು ವಿಜಯೇಂದ್ರನ ಚೇಲಾಗಳೇ. ಅವರ ಅಭಿಪ್ರಾಯ ಕೇಳಿದರೆ ವಿಜಯೇಂದ್ರ ಪರವಾಗಿಯೇ ಮಾತನಾಡುತ್ತಾರೆ” ಎಂದು ಟೀಕಿಸಿದರು.
“ಯಡಿಯೂರಪ್ಪ ಹಾಗೂ ವಿಜಯೇಂದ್ರ ಕೆಲ ಸ್ವಾಮೀಜಿಗಳನ್ನು ಮುಂದೆ ಮಾಡುತ್ತಿದ್ದಾರೆ. ಅವರನ್ನು ಕೆಳಗಿಳಿಸಿದರೆ ಲಿಂಗಾಯತರು ಬೆಂಬಲಿಸುವುದಿಲ್ಲ ಎಂದು ಅಮಿತ್ ಶಾಗೆ ಕರೆ ಮಾಡಿಸುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲ ಹಾಲಿ ಮತ್ತು ಮಾಜಿ ಶಾಸಕರು, ಮುಖಂಡರ ಅಭಿಪ್ರಾಯ ಪಡೆಯಬೇಕು ಎಂದು ಯತ್ನಾಳ್ ಒತ್ತಾಯಿಸಿದರು.



