ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಕಾನೂನು ಹೋರಾಟ ಮತ್ತಷ್ಟು ಕಠಿಣವಾಗುತ್ತಿದೆ. ಸುಪ್ರೀಂ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ, ಇದೀಗ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಕೋರ್ಟ್ ಮತ್ತು ನ್ಯಾಯಾಧೀಶರ ಬದಲಾವಣೆ ನಡೆದಿದೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಈ ಪ್ರಕರಣವನ್ನು ಸಿಸಿಹೆಚ್-57 ಕೋರ್ಟ್‌ನಿಂದ ಸಿಸಿಹೆಚ್-59ಕ್ಕೆ ವರ್ಗಾವಣೆ ಮಾಡಲಾಗಿದೆ. ಜೂನ್ 1ರಿಂದ ಈ ವರ್ಗಾವಣೆ ಜಾರಿಯಾಗಲಿದ್ದು, ನ್ಯಾಯಮೂರ್ತಿ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಮುಂದಿನ ವಿಚಾರಣೆ ಕೈಗೆತ್ತಿಕೊಳ್ಳಲಿದ್ದಾರೆ.
ಇದರ ಜೊತೆಗೆ ಸುಪ್ರೀಂ ಕೋರ್ಟ್ ನೀಡಿರುವ ಕಟ್ಟುನಿಟ್ಟಿನ ಸೂಚನೆ ಪ್ರಕರಣದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಒಂದು ವರ್ಷದೊಳಗೆ ಎಲ್ಲಾ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಸೂಚಿಸಿರುವ ಕಾರಣ, ಸ್ಥಳೀಯ ಕೋರ್ಟ್ ನಿರಂತರ ವಿಚಾರಣೆಗೆ ಸಿದ್ಧವಾಗುತ್ತಿದೆ.
ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ಈಗಾಗಲೇ ಸೆಷನ್ಸ್ ಕೋರ್ಟ್‌ಗೆ ಸಲ್ಲಿಸಿದ್ದು, ವಾರಕ್ಕೆ ಹಲವು ದಿನಗಳ ಕಾಲ ವೇಗದ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಒಂದೆಡೆ ಜಾಮೀನು ದಾರಿ ಮುಚ್ಚಿಕೊಂಡಿದ್ದರೆ, ಮತ್ತೊಂದೆಡೆ ಪ್ರಕರಣದ ವಿಚಾರಣೆ ವೇಗ ಪಡೆಯುತ್ತಿರುವುದು ದರ್ಶನ್ ಶಿಬಿರದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.



