ಐಪಿಎಲ್ ಸೀಸನ್-19ರ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಹಿಮಾಚಲ ಪ್ರದೇಶದ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣ ಸಜ್ಜಾಗಿದೆ.
ಮೇ 26ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.
ಧರ್ಮಶಾಲಾದ ಎಚ್‌ಪಿಸಿಎ ಮೈದಾನದಲ್ಲಿ ಬೆಂಗಳೂರು ತಂಡ ಇದುವರೆಗೆ ಕೇವಲ ಮೂರು ಪಂದ್ಯಗಳನ್ನು ಆಡಿದೆ. ಅದರಲ್ಲಿ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ವಿಶೇಷವಾಗಿ ಪಂಜಾಬ್ ವಿರುದ್ಧದ ಪಂದ್ಯಗಳಲ್ಲಿ ಬೆಂಗಳೂರು ಮೇಲುಗೈ ಸಾಧಿಸಿರುವುದು ಗಮನಾರ್ಹ.
ಧರ್ಮಶಾಲಾದಲ್ಲಿ ಬೆಂಗಳೂರಿನ ಪ್ರದರ್ಶನ:
- ಮೇ 17, 2026: ಪಂಜಾಬ್ ವಿರುದ್ಧ ಬೆಂಗಳೂರು 222 ರನ್ ಕಲೆಹಾಕಿ ಎದುರಾಳಿಯನ್ನು 199/8ಕ್ಕೆ ಕಟ್ಟಿಹಾಕಿ ಗೆಲುವು ಸಾಧಿಸಿತು.
- ಮೇ 9, 2024: ಇದೇ ಮೈದಾನದಲ್ಲಿ ಬೆಂಗಳೂರು 241 ರನ್ ಗಳಿಸಿ ಗರಿಷ್ಠ ಮೊತ್ತದ ದಾಖಲೆ ನಿರ್ಮಿಸಿತ್ತು. ಪಂಜಾಬ್ ತಂಡವನ್ನು 181 ರನ್‌ಗೆ ಆಲೌಟ್ ಮಾಡಿತ್ತು.
- ಮೇ 17, 2011: ಧರ್ಮಶಾಲಾದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಬೆಂಗಳೂರು 121 ರನ್‌ಗೆ ಆಲೌಟ್ ಆಗಿ ಸೋಲು ಕಂಡಿತ್ತು.
ಒಟ್ಟಾರೆ ಮೂರು ಪಂದ್ಯಗಳಲ್ಲಿ ಎರಡು ಜಯಗಳಿಸಿರುವ ಬೆಂಗಳೂರು ತಂಡಕ್ಕೆ ಈ ಮೈದಾನದ ಪಿಚ್ ಹಾಗೂ ಪರಿಸ್ಥಿತಿಗಳ ಬಗ್ಗೆ ಸ್ಪಷ್ಟ ಅರಿವು ಇದೆ. ಆದರೆ ಗುಜರಾತ್ ಟೈಟಾನ್ಸ್ ತಂಡ ಇದೇ ಮೊದಲ ಬಾರಿಗೆ ಇಲ್ಲಿ ಕಣಕ್ಕಿಳಿಯುತ್ತಿದೆ. ಇದೇ ಕಾರಣಕ್ಕೆ ಮೊದಲ ಕ್ವಾಲಿಫೈಯರ್‌ನಲ್ಲಿ ಬೆಂಗಳೂರು ತಂಡವೇ ಗೆಲುವಿನ ನೆಚ್ಚಿನ ತಂಡವಾಗಿ ಕಾಣುತ್ತಿದೆ.
ಧರ್ಮಶಾಲಾದಲ್ಲಿ ಮಿಂಚಿದ ಬೆಂಗಳೂರು ಆಟಗಾರರು:
ವಿರಾಟ್ ಕೊಹ್ಲಿ: – 2024ರಲ್ಲಿ 92 ರನ್ ಹಾಗೂ 2026ರಲ್ಲಿ 58 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ವೆಂಕಟೇಶ್ ಅಯ್ಯರ್: – ಪಂಜಾಬ್ ವಿರುದ್ಧ ಕೇವಲ 40 ಎಸೆತಗಳಲ್ಲಿ ಅಜೇಯ 73 ರನ್ ಬಾರಿಸಿ ಮಿಂಚಿದ್ದರು.
ರಾಸಿಖ್ ಸಲಾಮ್: ಡೆತ್ ಓವರ್‌ಗಳಲ್ಲಿ ಅದ್ಭುತ ಬೌಲಿಂಗ್ ಮಾಡಿ 3 ವಿಕೆಟ್ ಪಡೆದಿದ್ದರು.
ಬ್ಯಾಟಿಂಗ್‌ಗೆ ಸಹಕಾರಿ ಪಿಚ್ ಆಗಿರುವ ಧರ್ಮಶಾಲಾದಲ್ಲಿ ಮತ್ತೊಮ್ಮೆ ವಿರಾಟ್ ಕೊಹ್ಲಿ ಅಬ್ಬರಿಸುವ ನಿರೀಕ್ಷೆಯಿದೆ. ಇವರ ಜೊತೆ ರಜತ್ ಪಾಟಿದಾರ್ ಹಾಗೂ ಟಿಮ್ ಡೇವಿಡ್ ಮಿಂಚಿದರೆ ಗುಜರಾತ್ ವಿರುದ್ಧ ಬೆಂಗಳೂರು ಬೃಹತ್ ಮೊತ್ತ ಪೇರಿಸುವ ಸಾಧ್ಯತೆ ಇದೆ.



