ವಿಜಯಸಾಕ್ಷಿ ಸುದ್ದಿ, ಗದಗ: ಸಂಘ ಪರಿವಾರದ ಮುಖಂಡರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹುಯಿಲಗೋಳ ನಾರಾಯಣ ವೃತ್ತ (ಟಾಂಗಾಕೂಟ)ದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಸ್‌ಡಿಪಿಐ ಗದಗ ಜಿಲ್ಲಾ ಅಧ್ಯಕ್ಷ ಬಿಲಾಲ್ ಗೋಕಾವಿ, “ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಆಂದೋಲ ಸ್ವಾಮಿ ಸೇರಿದಂತೆ ಕೋಮು ದ್ವೇಷ ಭಾಷಣ ಹಾಗೂ ಗಲಭೆ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವವರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಸರ್ಕಾರ ಕಾನೂನು ಸುವ್ಯವಸ್ಥೆಯ ಮೂಲ ತತ್ವಗಳ ಮೇಲೆಯೇ ದಾಳಿ ನಡೆಸಿದೆ” ಎಂದು ಆರೋಪಿಸಿದರು.
ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಗೆ ಕಾರಣವಾಗಿರುವವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಸಮಾಜಘಾತುಕ ಶಕ್ತಿಗಳಿಗೆ ಸರ್ಕಾರ ವಿಶೇಷ ರಿಯಾಯಿತಿ ನೀಡುತ್ತಿರುವುದು ಪ್ರಶ್ನಾರ್ಹ ಎಂದು ಅವರು ಹೇಳಿದರು.
ಅಮಾಯಕರು, ಕನ್ನಡಪರ ಹೋರಾಟಗಾರರು ಹಾಗೂ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಿರಂತರವಾಗಿ ಕೋಮು ಪ್ರಚೋದನೆ ಮಾಡುವವರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಫ್ಫಾನ್ ತರಫ್ದಾರ್ ಮಾತನಾಡಿ, “ಮುಸ್ಲಿಮರು, ದಲಿತರು ಹಾಗೂ ಹಿಂದುಳಿದ ವರ್ಗಗಳ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳಲ್ಲಿ ಸರ್ಕಾರ ಕಾನೂನು ಅಡಚಣೆ ನೆಪ ಹೇಳುತ್ತಿದೆ. ಆದರೆ ದ್ವೇಷ ಭಾಷಣ ಮಾಡುವವರ ಪ್ರಕರಣ ಹಿಂಪಡೆಯುವಾಗ ಯಾವುದೇ ಅಡ್ಡಿ ಕಾಣಿಸುತ್ತಿಲ್ಲ” ಎಂದು ಟೀಕಿಸಿದರು.
ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಹುಬ್ಬಳ್ಳಿ ಪ್ರಕರಣಗಳಲ್ಲಿ ಅನೇಕ ಅಮಾಯಕ ಯುವಕರು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರ ಕುಟುಂಬಗಳ ನೋವು ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡ ಹಿದಾಯತುಲ್ಲಾ ಕಾಗದಗಾರ, ವಿಮೆನ್ ಇಂಡಿಯಾ ಮೂವ್ಮೆಂಟ್ ಪದಾಧಿಕಾರಿಗಳು, ಗದಗ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮುಸ್ತಾಕ್ ಹೊಸಮನಿ, ಕಾರ್ಯದರ್ಶಿ ಸಮೀರ್ ಕೊಟ್ಟೂರ್, ಇಬ್ರಾಹಿಂ ಕುಂದರಪಿ, ಫಯಾಜ್ ಚಿನ್ನೂರ್, ರಶೀದ್ ಕಟ್ಟಿಮನಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.



