ವಿಜಯಸಾಕ್ಷಿ ಸುದ್ದಿ, ಗದಗ: ನರಸಾಪುರ–ನಾಗಸಮುದ್ರ ಸರಹದ್ದಿನ ಫಲವತ್ತಾದ ಕೃಷಿಭೂಮಿಯನ್ನು ಕೆಐಎಡಿಬಿ ಮೂಲಕ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಕರವೇ ಎಚ್. ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ಎಂ.ಪಿ. ಪರ್ವತಗೌಡ್ರ ಮಾತನಾಡಿ, “ರೈತರ ವಿರೋಧದ ನಡುವೆಯೇ 250 ಎಕರೆಗಿಂತ ಹೆಚ್ಚು ಭೂಮಿಯನ್ನು ಕೆಐಎಡಿಬಿ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ಖಂಡನೀಯ” ಎಂದು ಹೇಳಿದರು.
ಈ ಹಿಂದೆ ಇದೇ ಭಾಗದಲ್ಲಿ 170 ಎಕರೆಗೂ ಅಧಿಕ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಬಳಿಕ ಚಿಕ್ಕೊಪ್ಪ–ನಾಗಸಮುದ್ರ ಮಧ್ಯದ ಸುಮಾರು 198 ಎಕರೆ ಭೂಮಿಯನ್ನು ಒಳಚರಂಡಿ ಶುದ್ಧೀಕರಣ ಘಟಕಕ್ಕಾಗಿ ವಶಪಡಿಸಿಕೊಳ್ಳಲಾಗಿದೆ. ಈಗ ಉಳಿದಿರುವ ಅಲ್ಪಭೂಮಿಯನ್ನೂ ಕಸಿದುಕೊಳ್ಳಲು ಮುಂದಾಗಿರುವುದರಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ–1966ರ ನಿಯಮಗಳನ್ನು ಉಲ್ಲಂಘಿಸಲಾಗಿದೆ. ರೈತರಿಗೆ ನೀಡಿರುವ ನೋಟಿಸ್‌ಗಳನ್ನು ಮುಂದಿನ 15 ದಿನಗಳೊಳಗೆ ಹಿಂಪಡೆಯಬೇಕು. ಜೊತೆಗೆ ರೈತರ ವಿರೋಧದ ನಡುವೆಯೇ ಫಲವತ್ತಾದ ಜಮೀನಿನಲ್ಲಿ ವಿಂಡ್ ಪ್ಯಾನ್ ಅಳವಡಿಸುವ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರಗತಿಪರ ರೈತ ಯಮನೂರಸಾಬ ನದಾಫ್ ಮಾತನಾಡಿ, “ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿ ಕಸಿದುಕೊಳ್ಳುವುದನ್ನು ನಾವು ಸಹಿಸುವುದಿಲ್ಲ. ಕೈಗಾರಿಕಾ ಪ್ರದೇಶಗಳನ್ನು ಸಚಿವರ ಕ್ಷೇತ್ರದಲ್ಲೇ ಸ್ಥಾಪಿಸಲಿ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಗತಿಪರ ಹೋರಾಟಗಾರ ಶಾಂತಯ್ಯ ಮುತ್ತಿನಿಪೆಂಡಿಮಠ ಮಾತನಾಡಿ, “ಕೆಐಎಡಿಬಿ ಹಾಗೂ ವಿಂಡ್ ಪ್ಯಾನ್ ಕಂಪನಿಗಳು ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣ ರದ್ದುಪಡಿಸಬೇಕು. ಇಲ್ಲದಿದ್ದರೆ ರೈತರು ಮತ್ತು ಗ್ರಾಮಸ್ಥರೊಂದಿಗೆ ಅಹೋರಾತ್ರಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಸಂಚಾಲಕ ಬಸಯ್ಯ ಗುಡ್ಡಿಮಠ, ಸಂತೋಷ ಹಿರೇಮಠ, ಕುಮಾರಗೌಡ ಬರಮಗೌಡ್ರ, ಯಶವಂತ ಉಪ್ಪಾರ, ಗುರುಯ್ಯ, ಶಾಂತಯ್ಯ, ಶಿವರಾಜ್ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
“ಪ್ರಾಣ ಕೊಟ್ಟರೂ ಭೂಮಿ ಬಿಡುವುದಿಲ್ಲ. ನಮ್ಮ ಭೂಮಿಗೆ ಕೈ ಹಾಕಿದರೆ ರೈತರು ಸುಮ್ಮನಿರುವುದಿಲ್ಲ”ಮಲ್ಲಿಕಾರ್ಜುನ ಕಿರೇಸೂರ,ಕರವೇ ಗೌರವಾಧ್ಯಕ್ಷ



