ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ಪಟ್ಟಣ ಸೇರಿದಂತೆ ಹೋಬಳಿಯ ಜಕ್ಕಲಿ, ಅಬ್ಬಿಗೇರಿ, ಬೂದಿಹಾಳ, ಮಾರನಬಸರಿ, ನಿಡಗುಂದಿ, ನಿಡಗುಂದಿ ಕೊಪ್ಪ, ಹಾಳಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶನಿವಾರ ಸಂಜೆ ಎರಡು ತಾಸಿಗೂ ಅಧಿಕ ಕಾಲ ಸುರಿದ ಭರ್ಜರಿ ಮಳೆ ರೈತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಬೇಸಿಗೆಯ ಬಿಸಿಗೆ ಕಂಗೆಟ್ಟಿದ್ದ ಜನರು ಮಳೆಯಿಂದ ತಂಪು ಅನುಭವಿಸಿದ್ದು, ಹೊಲಗಳಲ್ಲಿ ತೇವಾಂಶ ಹೆಚ್ಚಿದ ಹಿನ್ನೆಲೆ ರೈತರು ಬಿತ್ತನೆ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಹಲವೆಡೆ ಹೊಲಗದ್ದೆಗಳು ನೀರಿನಿಂದ ತುಂಬಿ ಕೃಷಿ ಚಟುವಟಿಕೆಗಳಿಗೆ ಚೈತನ್ಯ ತುಂಬಿದವು.
ಆದರೆ ಇದೇ ಮಳೆ ಜಕ್ಕಲಿ ಗ್ರಾಮದಲ್ಲಿ ಅವಾಂತರಕ್ಕೂ ಕಾರಣವಾಯಿತು. ಗ್ರಾಮದ ಅಗಸರ ಹಳ್ಳ ತುಂಬಿ ಹರಿದ ಪರಿಣಾಮ ಮುಳ್ಳಿನ ಕೊಂಪೆ ರಸ್ತೆ ಮಧ್ಯೆ ಬಿದ್ದು, ಜಕ್ಕಲಿ–ರೋಣ ಸಂಪರ್ಕ ರಸ್ತೆ ಶನಿವಾರ ರಾತ್ರಿ ಹಾಗೂ ರವಿವಾರ ಬೆಳಿಗ್ಗೆ ಕೆಲ ಗಂಟೆಗಳ ಕಾಲ ಬಂದ್ ಆಗಿತ್ತು.
ರವಿವಾರ ಬೆಳಿಗ್ಗೆ ರೋಣದಿಂದ ಜಕ್ಕಲಿ ಕಡೆ ಬರುತ್ತಿದ್ದ ಕೆಲವು ಬಸ್‌ಗಳು ದಾರಿ ಮಧ್ಯೆ ಅಡ್ಡಿಯಾದ ಮುಳ್ಳಿನ ಕೊಂಪೆಯಿಂದ ಮುಂದೆ ಸಾಗಲು ಸಾಧ್ಯವಾಗದೆ ಹಿಂತಿರುಗಿದವು ಎಂದು ತಿಳಿದು ಬಂದಿದೆ.
ಹಳ್ಳದ ನೀರು ರಭಸವಾಗಿ ಹರಿದು ಸುತ್ತಮುತ್ತಲಿನ ಜಮೀನುಗಳಿಗೆ ನುಗ್ಗಿದ ಪರಿಣಾಮ ರೈತರು ಆತಂಕಕ್ಕೀಡಾಗಿದ್ದಾರೆ. ಕೆಲ ಹೊಲಗಳಲ್ಲಿ ನೀರು ನಿಂತು ಬೆಳೆ ಹಾನಿಯ ಭೀತಿ ಎದುರಾಗಿದೆ.
ನಂತರ ಗ್ರಾಮಸ್ಥರೇ ಸ್ವಯಂಪ್ರೇರಿತವಾಗಿ ತೆರವು ಕಾರ್ಯಾಚರಣೆ ನಡೆಸಿ ರಸ್ತೆ ಮಧ್ಯೆ ಬಿದ್ದಿದ್ದ ಮುಳ್ಳಿನ ಕೊಂಪೆಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
“ವಿಂಡ್ ಪವರ್ ರಸ್ತೆಯೇ ಸಮಸ್ಯೆಗೆ ಮೂಲ”
ಅಗಸರ ಹಳ್ಳಕ್ಕೆ ವಿಂಡ್ ಪವರ್ ಕಂಪನಿ ಅಡ್ಡಲಾಗಿ ರಸ್ತೆ ನಿರ್ಮಿಸಿರುವುದರಿಂದ ನೀರಿನ ಸಹಜ ಹರಿವಿಗೆ ತೊಂದರೆಯಾಗುತ್ತಿದೆ. ರಸ್ತೆಯ ಕೆಳಭಾಗದಲ್ಲಿ ಸಣ್ಣ ಸೇತುವೆ ನಿರ್ಮಿಸಿರುವುದರಿಂದಲೇ ನೀರು ಉಕ್ಕಿ ಹರಿದು ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. “ತಕ್ಷಣ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು” ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.



