ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಕುಖ್ಯಾತ ‘ಪಂಕ್ಚರ್ ಮಾಫಿಯಾ’ ಮತ್ತೆ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.
ನಗರದ ಕೆಲ ಪ್ರಮುಖ ರಸ್ತೆಗಳಲ್ಲಿಯೇ ತಡರಾತ್ರಿ ನೂರಾರು ಮೊಳೆಗಳನ್ನು ಉದ್ದೇಶಪೂರ್ವಕವಾಗಿ ಚೆಲ್ಲಿ ವಾಹನ ಸವಾರರಿಗೆ ಬಲೆ ಬೀಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿಶೇಷವೆಂದರೆ ಈ ಬಾರಿ ಪೊಲೀಸ್ ಠಾಣೆಯೊಂದರ ಸಮೀಪದ ರಸ್ತೆಯಲ್ಲೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ವರದಿಗಳ ಪ್ರಕಾರ, ಈ ಜಾಲವು ರಾತ್ರಿ ವೇಳೆ ರಸ್ತೆಗಳ ಮೇಲೆ ಚೂಪಾದ ಮೊಳೆಗಳನ್ನು ಹರಡುತ್ತದೆ. ಬೆಳಗ್ಗೆ ಆ ಮಾರ್ಗದಲ್ಲಿ ಸಾಗುವ ದ್ವಿಚಕ್ರ ವಾಹನ ಹಾಗೂ ಕಾರುಗಳ ಟೈರ್‌ಗಳು ಪಂಕ್ಚರ್ ಆಗುತ್ತವೆ. ನಂತರ ಸವಾರರು ಹತ್ತಿರದ ಪಂಕ್ಚರ್ ಅಂಗಡಿಗಳಿಗೆ ತೆರಳುವಂತೆ ಮಾಡಲಾಗುತ್ತದೆ. ಅಲ್ಲಿ ಅನಗತ್ಯವಾಗಿ ಟೈರ್ ಬದಲಾವಣೆ, ರಿಪೇರಿ ಹೆಸರಿನಲ್ಲಿ ಸಾವಿರಾರು ರೂಪಾಯಿ ವಸೂಲಿ ಮಾಡಲಾಗುತ್ತದೆ ಎಂಬ ಆರೋಪ ಇದೆ.
ಈ ರೀತಿಯ ದಂಧೆ ನಗರದಲ್ಲಿ ಹಿಂದೆಯೂ ಬೆಳಕಿಗೆ ಬಂದಿದ್ದರೂ, ಇದೀಗ ಪೊಲೀಸ್ ಠಾಣೆಯ ಸುತ್ತಮುತ್ತಲೇ ನಡೆದಿರುವ ಘಟನೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಕಾನೂನು ವ್ಯವಸ್ಥೆಯ ಕಣ್ಣೆದುರಲ್ಲೇ ಇಂತಹ ಚಟುವಟಿಕೆ ನಡೆಯುತ್ತಿರುವುದು ಪೊಲೀಸ್ ಗಸ್ತು ಹಾಗೂ ಭದ್ರತಾ ವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದನ್ನು @Karnataka Portfolio ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸಾರ್ವಜನಿಕರು ಇಂತಹ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಸಲಹೆ ನೀಡಲಾಗಿದೆ.



